ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Nov 22, 2023, 01:00 AM IST
ಹಮಾಲಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದಿಂದ ಹುಬ್ಬಳ್ಳಿಯ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ (ಸಿಐಟಿಯು) ನೇತೃತ್ವದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದಿಂದ ಮಂಗಳವಾರ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ (ಸಿಐಟಿಯು) ನೇತೃತ್ವದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದಿಂದ ಮಂಗಳವಾರ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕರ ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ವ್ಯಾಪಾರ-ವಹಿವಾಟು ಹಾಗೂ ಜೀವನಾವಶ್ಯಕ ವಸ್ತಗಳ ಸಾಗಾಣಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಹಾಗೂ ಕನಿಷ್ಠ ಸೌಲಭ್ಯಗಳಿಂದ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾದ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರು ಕೃಷಿ ಉತ್ಪನ್ನ ಮಾರುಕಟ್ಟೆಗಳು, ಅಕ್ಕಿ, ಎಣ್ಣೆ, ಬೆಳೆ ಮುಂತಾದ ಗಿರಣಿಗಳಲ್ಲಿ, ಪಾನೀಯ ನಿಗಮ, ಅನ್ಯಭಾಗ್ಯ, ಎಫ್‌ಸಿಐ, ಕೇಂದ್ರ ಹಾಗೂ ರಾಜ್ಯ ಉಗ್ರಾಣಗಳು ಮುಂತಾದ ಸರ್ಕಾರಿ ಮತ್ತು ಖಾಸಗಿ ಗೋಡೌನ್ ವೇರ್‌ಹೌಸ್‌ಗಳಲ್ಲಿ, ನಗರ ಹಾಗೂ ಗ್ರಾಮೀಣ ಬಜಾರಗಳಲ್ಲಿ, ಬಸ್‌ಸ್ಟ್ಯಾಂಡ್‌, ರೈಲು ನಿಲ್ದಾಣ, ಬಂದರುಗಳಲ್ಲಿ ಸುಮಾರು 4-5 ಲಕ್ಷಕ್ಕೂ ಅಧಿಕ ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.

ಹಮಾಲಿ ಕಾರ್ಮಿಕರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅವರ ಪ್ರಮುಖ ಬೇಡಿಕೆಗಳು ನನೆಗುದಿಗೆ ಬಿದ್ದಿವೆ. ರಾಜ್ಯದಲ್ಲಿ ಕಾರ್ಮಿಕರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಈಗಲಾದರೂ ನಮ್ಮ ಬೇಡಿಕೆಗಳಿಗೆ ಮುಕ್ತಿ ನೀಡುವ ಮೂಲಕ ಸಮಸ್ಯೆಗಳ ನಿವಾರಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಬೇಡಿಕೆಗಳು:

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಮಂಡಳಿಯನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢಿಕರಿಸಿ ಅಭಿವೃದ್ಧಿಪಡಿಸಲು ಸೂಕ್ತಕ್ರಮ ವಹಿಸಬೇಕು. ಎಪಿಎಂಸಿಗಳಲ್ಲಿ ಲೈಸೆನ್ಸ್ ಪಡೆದು ಕೆಲಸ ನಿರ್ವಹಿಸುವ 60 ವರ್ಷ ಪೂರೈಸಿದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಟ ₹1 ಲಕ್ಷ ನಿವೃತ್ತಿ ಪರಿಹಾರ ನೀಡಬೇಕು. ಎಲ್ಲ ವಿಭಾಗದ ಹಮಾಲಿ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಯಾಗುವಂತೆ ಕಾರ್ಮಿಕ ಇಲಾಖೆ ಮುತವರ್ಜಿ ವಹಿಸಬೇಕು.

ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ಪ್ರಮುಖ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಸಿದ್ಧಪಡಿಸಿರುವ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ (ಪಶ್ಚಿಮ ಬಂಗಾಲ ಮಾದರಿ)ಯನ್ನು ಕಾನೂನು ಸ್ವರೂಪದಲ್ಲಿ ಜಾರಿ ಮಾಡಬೇಕು. ಅದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಕನಿಷ್ಠ ₹1000 ಕೋಟಿಗಳ ಹಣಕಾಸು ನೆರವು ನೀಡಬೇಕು. ರಾಜ್ಯ, ಕೇಂದ್ರ ಸರ್ಕಾರದ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಎಲ್ಲ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆಯನ್ನು ಜಾರಿ ಮಾಡುವುದು ಸೇರಿದಂತೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ವೇಳೆ ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ, ಮುಖಂಡರಾದ ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್, ಮಂಜುನಾಥ ಹುಜರಾತಿ, ಹನಮಂತ ಅಂಬಿಗೇರ, ಮಹ್ಮದರಫೀಕ್ ಮುಳಗುಂದ, ಗಾಳೆಪ್ಪ ಮುತ್ಯಾಳ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ