ಕನ್ನಡಪ್ರಭ ವಾರ್ತೆ ಪಾವಗಡ
ಕಳೆದ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ತಾಲೂಕು ಕಳಪೆ ಸಾಧನೆ ಮಾಡಿದ್ದು ಈ ವರ್ಷದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಕ್ರಮವಹಿಸಬೇಕು ಎಂದು ಶಾಸಕ ಎಚ್.ವಿ.ವೆಂಕಟೇಶ್ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ 2ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕತೆ ವಹಿಸಿ ಮಾತನಾಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ವು ಫಲಿತಾಂಶ ಬರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ರೂಪಿಸುವಂತೆ ಕರೆ ನೀಡಿದ ಅವರು, ಕಳೆದ ಸಾಲಿಗೆ ಪರೀಕ್ಷೆಯ ಫಲಿತಾಂಶದಿಂದಾಗಿ ಸಾಕಷ್ಟು ಹಿನ್ನೆಡೆಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ನಿರಾಸೆ ಉತ್ತಮ ಫಲಿತಾಂಶ ತರಲು ಪ್ರಯತ್ನಿಸಿ ಎಂದು ಸೂಚಿಸಿದರು. ದಿನ ನಿತ್ಯ ಒಂದು ವಿಶೇಷ ತರಗತಿ ತೆಗೆದುಕೊಳ್ಳಬೇಕು. ಸರ್ಕಾರಿ ಶಾಲೆಯ ಶಿಕ್ಷಕರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ತಾಲೂಕಿನಲ್ಲಿ ಖಾಸಗಿ ಶಾಲೆಗಳಲ್ಲಿ ಡೊನೆಷನ್ ಹೆಚ್ಚಾಗಿ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಎಂದು ಬಿಇಒಗೆ ಸೂಚಿದರು.ಬಿಇಒ ರೇಣುಕಮ್ಮ ಮಾತನಾಡಿ, ಎಸ್ಸೆಸ್ಸೆಯಲ್ಲಿ ಉತ್ತಮ ಫಲಿತಾಂಶ ಬರಲು ಅನೇಕ ಕ್ರಮಗಳು ಕೈಗೊಂಡಿದ್ದು 2025-26ನೇ ಫಲಿತಾಂಶ ದಲ್ಲಿ ಶೇ.90 ಬರುವುದಾಗಿ ಭರವಸೆ ನೀಡಿದರು. ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಈಗ 2 ಇದ್ದು, ಶಾಸಕರು ಸಚಿವರೊಂದಿಗೆ ಮಾತನಾಡಿ ಇನ್ನೂ ಶಾಲೆಗಳು ಮಂಜೂರು ಮಾಡಿಸಿದ್ದು, ಮುಂದಿನ ವರ್ಷದಿಂದ ಪ್ರಾರಂಭವಾಗಲಿವೆ ఎంದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆ ಗಳಲ್ಲಿ ದರ ಪಟ್ಟಿ ಪ್ರಕಟಿಸಬೇಕು ಎಂದು ಶಾಸಕರು ಹೇಳಿದರು.ಸೋಲಾರ್ ವಿಶೇಷ ಅನುದಾನದಲ್ಲಿ ತಾಲೂಕಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚನೆ ನೀಡಬೇಕು ಎಂದು ತಾಪಂ ಇಒ ಬಿ.ಕೆ.ಉತ್ತಮ ಶಾಸಕರಿಗೆ ಮನವಿ ಮಾಡಿದರು. ಸೋಲಾರ್.ಸಿ.ಎಸ್. ಆರ್.ಅನುದಾನ ನನ್ನ ಗಮನಕ್ಕೆ ತರದೆ ನೀಡಬಾರದು ಎಂದು ಸೋಲಾರ್ ಅಧಿಕಾರಿಗಳಿಗೆ ಹೇಳಿದರು. ಅಂಗನವಾಡಿ,ತೋಟಗಾರಿಕೆ, ಕೃಷಿ, ಅರಣ್ಯ, ಅಬಕಾರಿ, ಆಹಾರ ಸೇರಿದಂತೆ ಇಲಾಖೆಗಳಿಂದ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿಗೆ ಹೆಚ್ವು ಅಧ್ಯತೆ ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಆಡಳಿತಾಧಿಕಾರಿ ಈಶ್ವರಪ್ಪ, ತಹಸೀಲ್ದಾರ್ ವೈ.ರವಿ,ತಾಲೂಕು ಸರ್ಕಾರಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಾಪಣ್ಣ ಹಾಗೂ ಎಲ್ಲ ಇಲಾಖಾವಾರು ಅಧಿಕಾರಿಗಳು ಸಭೆಯಲ್ಲಿ ಇದ್ದರು.