ಕನ್ನಡಪ್ರಭ ವಾರ್ತೆ ಬೆಳಗಾವಿ ಮೂರು ದಿನದ ಹಸುಗೂಸನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ರಾಮದುರ್ಗ ತಾಲೂಕಿನ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ. ನ.23ರಂದು ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದ ಅಶ್ವಿನಿ ಹನುಮಂತ ಹಳಕಟ್ಟಿ ಎಂಬವರು ಹೆರಿಗೆಗಾಗಿ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅದೇ ದಿನ ಸಂಜೆ 6.55ಕ್ಕೆ ಅಶ್ವಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನ ಮಗು ಆರೋಗ್ಯವಾಗಿತ್ತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮೂರು ದಿನದ ಹಸುಗೂಸನ್ನು ಹೆತ್ತ ತಾಯಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ರಾಮದುರ್ಗ ತಾಲೂಕಿನ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ.ನ.23ರಂದು ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದ ಅಶ್ವಿನಿ ಹನುಮಂತ ಹಳಕಟ್ಟಿ ಎಂಬವರು ಹೆರಿಗೆಗಾಗಿ ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅದೇ ದಿನ ಸಂಜೆ 6.55ಕ್ಕೆ ಅಶ್ವಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನ ಮಗು ಆರೋಗ್ಯವಾಗಿತ್ತು. ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ನಿಗಾ ವಹಿಸಿದ್ದರು. ಆದರೆ, ಮಂಗಳವಾರ ಏಕಾಏಕಿ ಮಗು ಅಳುವುದನ್ನು ನಿಲ್ಲಿಸಿತ್ತು. ಇದರಿಂದ ಅನುಮಾನಗೊಂಡ ವೈದ್ಯರು ಪರೀಕ್ಷಿಸಿದಾಗ, ಮಗು ಮೃತಪಟ್ಟಿರುವುದು ಗೊತ್ತಾಗಿದೆ.
ಈ ಮೊದಲು ಅಶ್ವಿನಿಗೆ ಮೂವರು ಹೆಣ್ಣು ಮಕ್ಕಳಿದ್ದು, ಈ ಬಾರಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೇ, ನಾಲ್ಕನೇ ಮಗು ಕೂಡ ಹೆಣ್ಣಾಗಿತ್ತು. ಇದರಿಂದ ಹತಾಸೆಗೊಂಡ ತಾಯಿ ಅಶ್ವಿನಿ ಮೂರು ದಿನದ ತನ್ನ ಹಸುಗೂಸಿನ ಉಸಿರು ನಿಲ್ಲಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.ಸುರೇಬಾನ್ ಪೊಲೀಸ್ ಠಾಣೆಯಲ್ಲಿ ತಾಯಿ ಅಶ್ವಿನಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.
ಇನ್ನು ಈ ಬಗ್ಗೆ ತನಿಖೆ ಶುರು ಮಾಡಿರುವ ಪೊಲೀಸರು ಈಗ ಎಲ್ಲಾ ರೀತಿಯ ಸಾಕ್ಷಾಧಾರ ಸಂಗ್ರಹಕ್ಕೆ ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿ ಮಹಿಳೆಗೆ ಮನೆಯಲ್ಲಿ ಏನಾದರೂ ಗಂಡು ಮಗು ಬೇಕು ಎನ್ನುವ ಒತ್ತಡ ಇತ್ತಾ..? ಇಲ್ಲವೇ ಈಕೆಗೆ ಗಂಡು ಮಗುವಿನ ಮೇಲೆ ಆಸೆ ಇತ್ತಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.ಈ ಬಗ್ಗೆ ರಾಮದುರ್ಗ ತಾಲೂಕಾ ವೈದ್ಯಾಧಿಕಾರಿ ಡಾ.ನವೀನ ನಿಜಗುಲಿ ಮಾಹಿತಿ ನೀಡಿದ್ದು, ಕಳೆದ ಮೂರು ದಿನಗಳಿಂದ ಮಗು ಆರಾಮಾಗಿಯೇ ಇತ್ತು. ಇಂದು ಬೆಳಿಗ್ಗೆ ಮಗು ಅತ್ತಿರಲಿಲ್ಲ. ಹಾಗಾಗಿ, ಅನುಮಾನ ಬಂದು ಸಿಬ್ಬಂದಿ ನೋಡಿದಾಗ ಮಗು ಸಂಶಯಾಸ್ಪದ ರೀತಿ ಸಾವನ್ನಪ್ಪಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮತ್ತು ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದಿದ್ದಾರೆ.
ಕೋಟ್‌ಅಶ್ವಿನಿ ಹಳಕಟ್ಟಿ ಮಗುವನ್ನು ಕೊಲೆ ಮಾಡಿರುವುದು ದುರಾದೃಷ್ಟಕರ. ನಾಲ್ಕನೇ ಮಗು ಕೂಡ ಹೆಣ್ಣಾಗಿದ್ದರಿಂದ ಬೇಜಾರಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಿಶುವನ್ನು ನನ್ನ ಮಗಳು ಕೊಲೆ ಮಾಡಿದ್ದಾಳೆ ಎಂದು ಅಶ್ವಿನಿ ಅವರ ತಾಯಿ ರೇಣುಕಾ ಮೂಲಿಮನಿ ದೂರು ನೀಡಿದ್ದಾರೆ. ಆ ಪ್ರಕಾರ ಕೊಲೆ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಸದ್ಯ ಆರೋಪಿ ಮಹಿಳೆ ಬಾಣಂತಿ. ಕಾನೂನಿನ ಪ್ರಕ್ರಿಯೆಗೆ ಒಳಪಡಿಸಲು ಯಾವುದೇ ಅಡೆತಡೆ ಇಲ್ಲ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತೇವೆ. ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ