ಶಿರಸಿ: ಲಕ್ಷಾಂತರ ರುಪಾಯಿ ವ್ಯಯಿಸಿ ಕೊಂಡವಾಡಿ ನಿರ್ಮಿಸಲಾಗಿದೆ. ಅದು ನಿರ್ವಹಣೆಯಿಲ್ಲದೇ ಹಾಳುಬಿದ್ದಿದೆ. ಅದಕ್ಕೆ ಅಗತ್ಯ ಹಣ ನೀಡಿ, ಸರಿಪಡಿಸಬೇಕು. ನಗರದಲ್ಲಿರುವ ಬಿಡಾಡಿ ಜಾನುವಾರುಗಳನ್ನು ಅಲ್ಲಿ ಸಾಕಲು ಕ್ರಮ ವಹಿಸಬೇಕೆಂದು ವಿವಿಧ ಹಿಂದೂಪರ ಸಂಘಟನೆಗಳು ನಗರಸಭೆ ಅಧ್ಯಕ್ಷ, ಪೌರಾಯುಕ್ತಗೆ ಆಗ್ರಹಿಸಿದರು.ನಗರ ವ್ಯಾಪ್ತಿಯಲ್ಲಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಲಾಗುತ್ತದೆ. ಗೋ ಮಾತೆ ಸಾಕಲು ನಗರಸಭೆಯಿಂದ ಸಾಧ್ಯವಿಲ್ಲವೇ? ಬಿಡಾಡಿ ದನಗಳನ್ನು ಸಾಕಲು ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಕೊಂಡವಾಡಿ ಮಾಡಲಾಗಿದೆ. ಆದರೆ ಅಲ್ಲಿ ದನಗಳಿಲ್ಲ. ಎಲ್ಲ ಜಾನುವಾರು ರಸ್ತೆಯಲ್ಲಿ ಇವೆ. ವಾಹನ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳಿಗೆ ಕೊಂಡವಾಡಿಯಲ್ಲಿ ಆಶ್ರಯ ಸಿಗುತ್ತಿಲ್ಲ. ಕೊಂಡವಾಡಿಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವು ದಾಸ್ತಾನಿಲ್ಲ. ನಗರಸಭೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಪ್ರಭಾರ ಪೌರಾಯುಕ್ತ ಶಿವರಾಜ ಪ್ರತಿಕ್ರಿಯಿಸಿ, ಕೊಂಡವಾಡಿಯನ್ನು ನಗರಸಭೆಯಿಂದ ನಿರ್ವಹಣೆ ಕಷ್ಟಸಾಧ್ಯ. ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡರೆ ಒಂದು ಜಾನುವಾರಿಗೆ ಇಂತಿಷ್ಟು ಹಣ ಎಂದು ನಗರಸಭೆಯಿಂದ ಅವರಿಗೆ ನೀಡಲಾಗುತ್ತದೆ. ಅಧ್ಯಕ್ಷ, ಸದಸ್ಯರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಈ ವೇಳೆ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಕೃಷ್ಣಮೂರ್ತಿ ಭಟ್ಟ, ಹರ್ಷ ನಾಯ್ಕ, ಆದರ್ಶ, ರವಿ ಗೌಳಿ, ಅಮಿತ ಶೇಟ್, ಸತೀಶ ನಾಯ್ಕ, ಅಕ್ಷಯ ಮೊಗೇರ, ರಾಘವೇಂದ್ರ ಆಚಾರಿ ಇದ್ದರು.