ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಚರ್ಚಿಸುವ ಸಂಬಂಧ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ರೈತರು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಮುಂದಾಗುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಹೊರತುಪಡಿಸಿ ಬೆಟ್ಟಕ್ಕೆ ಅನಧಿಕೃತವಾಗಿ ಖಾಸಗಿ ವಾಹನಗಳ ಸಂಚರಿಸುತ್ತಿವೆ. ಸ್ಥಳೀಯ ವಾಹನಗಳಿಗೆ ಅವಕಾಶ ಇಲ್ಲದ್ದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಬೆಟ್ಟಕ್ಕೆ ಹೋಗುವ ಸಾರ್ವಜನಿಕರಿಗೆ ಬಸ್ ಹತ್ತುವ ಸ್ಥಳದಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವಂತೆ ರೈತ ಮುಖಂಡರು ಸಭೆಯ ಗಮನಕ್ಕೆ ತಂದರು.ಕೇರಳದಿಂದ ಜೈವಿಕ ತ್ಯಾಜ್ಯವನ್ನು ರೈತರ ಜಮೀನಿನಲ್ಲಿ ಸುರಿಯಲಾಗುತ್ತಿದೆ. ಜಮೀನಿನಲ್ಲಿ ಬೆಳೆದಿರುವ ತೇಗದ ಮರ ಕಡಿಯಲು ಅನುಮತಿಯಲ್ಲಿ ವಿಳಂಬ. ಕೋತಿ, ನವಿಲು, ಹಂದಿ ದಾಳಿಯನ್ನು ಮಾನವ-ಪ್ರಾಣಿ ಸಂಘರ್ಷಕ್ಕೆ ಸೇರ್ಪಡೆ ಮಾಡಿಲ್ಲದಿರುವುದು, ಸಣ್ಣ ರಸ್ತೆಗಳಲ್ಲಿ ಗಣಿಗಾರಿಕೆಯ ಅಧಿಕ ಭಾರದ ಟಿಪ್ಪರ್, ಕ್ರಶರ್ ಗಳ ಓಡಾಟದಿಂದ ಜನರಿಗೆ ತೊಂದರೆ ಸೇರಿದಂತೆ ಇತರೆ ಸಮಸ್ಯೆಗಳು ಸಭೆಯಲ್ಲಿ ರೈತರಿಂದ ಪ್ರಸ್ತಾಪವಾದವು.
ಅಗತ್ಯಕ್ಕಿಂತ ಹೆಚ್ಚಿನ ಭಾರದ ವಾಹನಗಳು ಸಾಮಾನ್ಯ ರಸ್ತೆಯಲ್ಲಿ ಸಂಚರಿಸುವುದರಿಂದ ರಸ್ತೆಗಳು ಬೇಗ ದುರಸ್ತಿಗೊಳಗಾಗಲಿವೆ. ಇದನ್ನು ತಡೆಯಲು ಹಾಗೂ ಅಧಿಕ ಭಾರದ ಟಿಪ್ಪರ್ ಓಡಾಟ ನಿಯಂತ್ರಿಸಲು ರಸ್ತೆ ಭಾರ ಮಿತಿ ಫಲಕ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕೊತ್ತಲವಾಡಿ ಹಾಗೂ ಹೆಗ್ಗೋಠಾರ ನಡುವೆ ಆರ್.ಟಿ.ಒ ಚೆಕ್‌ಪೋಸ್ಟ್ ತೆರೆಯಬೇಕು. ಗಣಿಗಾರಿಕೆ ನಡೆಯುವ ಸುತ್ತಲಿನ ಪ್ರದೇಶಗಳಲ್ಲಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಸದ್ಯದಲ್ಲಿಯೇ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಭೆ ಕರೆದು ಚಿರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯ ಸಮರ್ಪಕವಾಗಿರಬೇಕು. ಯಳಂದೂರಿನ ಅಂಬಳೆ ಗ್ರಾಮಕ್ಕೆ ಈವರೆಗೂ ಬಸ್ ಸೌಲಭ್ಯವಿರುವುದಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಕೆಲಸಕ್ಕೆ ಹೋಗಿ ಬರುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಬೆಟ್ಟಳ್ಳಿ ಗ್ರಾಮದಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಈ ಬಗ್ಗೆ ತುರ್ತಾಗಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.ರೈತ ಮುಖಂಡರಾದ ಕಟ್ನವಾಡಿ ಗುರುಪ್ರಸಾದ್, ಮಹದೇವಪ್ಪ, ಸಂಪತ್, ಇತರೆ ರೈತ ಮುಖಂಡರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.