ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಏಳಿಗೆಗಾಗಿ ಪಪೂ ಮುಪ್ಪಿನ ಬಸವಲಿಂಗ ಸ್ವಾಮಿಗಳವರು ಅಕ್ಷರ ಗ್ರಂಥಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಂಡು ನೀವುಗಳೆಲ್ಲ ಪ್ರತಿಭಾ ಸಂಪನ್ನರಾಗಿ ಮೆರೆಯಬೇಕೆಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನರೇಗಲ್ಲ: ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಏಳಿಗೆಗಾಗಿ ಪಪೂ ಮುಪ್ಪಿನ ಬಸವಲಿಂಗ ಸ್ವಾಮಿಗಳವರು ಅಕ್ಷರ ಗ್ರಂಥಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದರ ಸದುಪಯೋಗವನ್ನು ಪಡೆದುಕೊಂಡು ನೀವುಗಳೆಲ್ಲ ಪ್ರತಿಭಾ ಸಂಪನ್ನರಾಗಿ ಮೆರೆಯಬೇಕೆಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಮಂಗಳವಾರ ನೂತನ ಅಕ್ಷರ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ಶಿಕ್ಷಣ ಸಂಸ್ಥೆಗಳಿಲ್ಲದ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದದ್ದು ಮಠಮಾನ್ಯಗಳು. ಇದರಿಂದ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಮೂಡಲು ಕಾರಣವಾಯಿತು. ಅಂತಹ ಮಠಮಾನ್ಯಗಳಲ್ಲಿ ಹಾಲಕೆರೆಯ ಶ್ರೀಅನ್ನದಾನೇಶ್ವರ ಮಠವೂ ಒಂದು ಎಂದರು.ಜ್ಞಾನ ದಾಸೋಹದ ಜೊತೆಗೆ ಅನ್ನ ದಾಸೋಹವನ್ನೂ ನೀಡಿ ಈವರೆಗೆ ಲಕ್ಷಾಂತರ ಜನರ ಬಾಳನ್ನು ಬೆಳಗಿದ ಕೀರ್ತಿ ಅನ್ನದಾನೇಶ್ವರ ಮಠಕ್ಕೆ ಸೇರುತ್ತದೆ. ಲಿಂ. ಡಾ.ಅಭಿನವ ಅನ್ನದಾನ ಸ್ವಾಮಿಗಳವರು ಈ ಮಠದ ಪೀಠಾಧಿಪತಿಗಳಾದ ನಂತರ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಒಂದು ಮೆರಗು ಬಂದಿತು. ನಕಲು ರಹಿತ ಪರೀಕ್ಷೆಗಳನ್ನು ನಡೆಸಿದ ಕೀರ್ತಿ ಡಾ.ಅಭಿನವ ಅನ್ನದಾನ ಸ್ವಾಮಿಗಳವರಿಗೆ ಸಲ್ಲುತ್ತದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಮಾನಾಡಿ, ತಂದೆ ತಾಯಿಗಳು ಕಂಡಿರುವ ಕನಸನ್ನು ನನಸು ಮಾಡಲು ವಿದ್ಯಾರ್ಥಿಗಳು ಶ್ರಮಿಸಬೇಕು. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ನಿಮ್ಮನ್ನು ಸಾಕಿ ಸಲುಹಿದ ಅವರಿಗೆ ನೀವುಗಳು ನೆಮ್ಮದಿಯ ಬದುಕನ್ನು ನೀಡಬೇಕು. ಅದಕ್ಕೆ ಶಿಕ್ಷಣ ಮತ್ತು ಸಂಸ್ಕಾರಗಳು ಸಹಾಯಕವಾಗುತ್ತವೆ. ಈ ಎರಡೂ ಮೌಲ್ಯಗಳನ್ನು ಇಲ್ಲಿಂದ ಕಲಿತುಕೊಂಡು ನೀವುಗಳು ಜೀವನದಲ್ಲಿ ಉಜ್ವಲ ಭವಿಷ್ಯವನ್ನು ಪಡೆಯಿರಿ. ನಿಮ್ಮ ಕಲಿಕೆಗೆ ಅನುಕೂಲವಾಗಲೆಂದೆ ಇಂದು ಈ ಅಕ್ಷರ ಗ್ರಂಥಾಲಯವನ್ನು ನಿರ್ಮಿಸಿ, ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.
ಮೊದಲಿನಿಂದಲೂ ರೋಣದ ಪಾಟೀಲ ಮನೆತನವು ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ. ಅವರಲ್ಲಿ ಉದಾರತೆ ತಾನೆ ತಾನಗಿ ಕಾಣುತ್ತಿದೆ. ಅದರ ದ್ಯೋತಕವಾಗಿ ಇಂದು ಈ ಅಕ್ಷರ ಗ್ರಂಥಾಲಯವನ್ನು ಉದ್ಘಾಟಿಸಿದ ಶಾಸಕರು ಸಂಸ್ಥಗೆ ೫೦ ಲಕ್ಷ ರುಪಾಯಿಗಳ ಅನುದಾನ ನೀಡುವ ಘೋಷಣೆ ಮಾಡಿದ್ದು ಅವರ ಶೈಕ್ಷಣಿಕ ಪ್ರೀತಿಗೆ ಸಾಕ್ಷಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಶ್ರೀಗಳು ಅಭಿನವ ಶ್ರೀ ಶಿಷ್ಯವೇತನವನ್ನು ಇಬ್ಬರು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಪಿ. ಕೃಷ್ಣಪ್ಪ, ಹ್ಯೂಮನ್ ಮೈಂಡ್ ಸೆಟ್‌ನ ಕೋಚ್ ಮಹೇಶ ಮಾಸಾಳ, ಎಂ.ಜಿ. ಸೋಮಕಟ್ಟಿ, ರವೀಂದ್ರನಾಥ ದೊಡ್ಡಮೇಟಿ, ಎನ್.ಆರ್.ಗೌಡರ, ಬಸವರಾಜ ಕಳಕಣ್ಣವರ, ಎಂ.ಪಿ.ಪಾಟೀಲ, ವಿ.ಬಿ.ಸೋಮನಕಟ್ಟಿಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಅಳಗವಾಡಿ, ಬಸವರಾಜ ನವಲಗುಂದ, ನಿವೃತ್ತ ಶಿಕ್ಷಕ ಎಂ.ಎಸ್.ದಢೇಸೂರಮಠ, ನಿಂಗನಗೌಡ ಲಕ್ಕನಗೌಡ್ರ, ಎಸ್.ಎ. ಪಾಟೀಲ, ಶೇಕಪ್ಪ ಜುಟ್ಲ, ಅಲ್ಲಾಭಕ್ಷಿ ನದಾಫ್, ಶೇಕಪ್ಪ ಕೆಂಗಾರ, ಶರಣಪ್ಪ ರೇವಡಿ, ನಿವೃತ್ತ ಉಪನ್ಯಾಸಕ ತಳಬಾಳ ಇದ್ದರು.