ಖಾತಾ ಆಂದೋಲನ ಅನುಕೂಲ ಪಡೆಯಿರಿ: ಯೋಗೇಶ್ವರ್‌

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಚನ್ನಪಟ್ಟಣ: ನಗರ ವ್ಯಾಪ್ತಿಯಲ್ಲಿ ಅಕ್ರಮ ಖಾತೆ, ಮತ್ತಿತರ ಸಮಸ್ಯೆಗಳನ್ನು ತಡೆದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ವತಿಯಿಂದ ಖಾತಾ ಆಂದೋಲನ ಹಮ್ಮಿಕೊಂಡಿದ್ದು, ಸದ್ಬಳಸಿಕೊಳ್ಳಬೇಕು ಎಂದು ಶಾಸಕ ಯೋಗೇಶ್ವರ್ ಮನವಿ ಮಾಡಿದರು.

ಚನ್ನಪಟ್ಟಣ: ನಗರ ವ್ಯಾಪ್ತಿಯಲ್ಲಿ ಅಕ್ರಮ ಖಾತೆ, ಮತ್ತಿತರ ಸಮಸ್ಯೆಗಳನ್ನು ತಡೆದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ವತಿಯಿಂದ ಖಾತಾ ಆಂದೋಲನ ಹಮ್ಮಿಕೊಂಡಿದ್ದು, ಸದ್ಬಳಸಿಕೊಳ್ಳಬೇಕು ಎಂದು ಶಾಸಕ ಯೋಗೇಶ್ವರ್ ಮನವಿ ಮಾಡಿದರು.

ನಗರದ ಮಂಗಳವಾರಪೇಟೆ ಬಳಿಯ ಮರಳುಹೊಲದ ರಾಮಮಂದಿರ ಆವರಣದಲ್ಲಿ ನಗರಸಭೆ ಆಯೋಜಿಸಿದ್ದ ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲ ಗ್ರಾಪಂಗಳು ನಗರಸಭೆ ವ್ಯಾಪ್ತಿಗೆ ಸೇರಿದ್ದು ಅಲ್ಲಿನ ಆಸ್ತಿಗಳ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಜೊತೆಗೆ ರೆವಿನ್ಯೂ ಖಾತೆ ಮಾಡುವಂತೆ ಒತ್ತಡ ಇದೆ. ಇವೆಲ್ಲವನ್ನು ಸರಿಪಡಿಸಲು ಸಾರ್ವಜನಿಕರು ಹಾಗೂ ನಗರಸಭಾ ಸದಸ್ಯರು ಸಹಕರಿಸುವಂತೆ ಮಾಡಿದರು.

ಕೇವಲ ಹಣ ಮಾಡುವ ಉದ್ದೇಶದಿಂದ ಬಡಾವಣೆಗಳು ನಿರ್ಮಿಸುವ ಭೂ ಮಾಫಿಯಾ, ಇಷ್ಟ ಬಂದಂತೆ ನಿವೇಶನಗಳನ್ನು ಹಾಕಿರುವ ಪರಿಣಾಮ ಸಮಸ್ಯೆಯಾಗಿದೆ. ಸೂಕ್ತ ರಸ್ತೆ, ಒಳ ಚರಂಡಿ, ಪಾರ್ಕ್‌ಗಳಿಗೆ ಸ್ಥಳ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಕಡಿವಾಣ ಹಾಕಲು ಎಲ್ಲರ ಸಹಕಾರ ಅಗತ್ಯ. ಖಾತಾ ಆಂದೋಲನದಿಂದ ಸಾರ್ವಜನಿಕರು ನಗರಸಭೆಗೆ ಅಲೆದಾಡುವುದು ತಪ್ಪಲಿದೆ. ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅಗತ್ಯ ದಾಖಲೆಗಳನ್ನು ನೀಡಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಿಮ್ಮ ನಿವೇಶನಗಳ ಇ ಖಾತೆ ಮಾಡಿಸಿಕೊಳ್ಳಿ ಎಂದರು.

ಚನ್ನಪಟ್ಟಣ ಸರಿಪಡಿಸೋಣಾ:

ನಗರ ಶರವೇಗದಲ್ಲಿ ಬೆಳೆಯುತ್ತಿದೆ. ಹತ್ತಾರು ಸಮಸ್ಯೆಗಳಿಂದ ಹಾಳಾಗಿರುವ ಚನ್ನಪಟ್ಟಣವನ್ನು ಸರಿಪಡಿಸಲು ಪಕ್ಷಭೇದ ಮರೆತು ನಾವೆಲ್ಲರೂ ಶ್ರಮಿಸಬೇಕಿದೆ. ನಾನು ಈಗಾಗಲೇ ಸರ್ಕಾರಕ್ಕೆ ರೆವಿನ್ಯೂ ಲೇಔಟ್ ಅನ್ನು ಬಂದ್ ಮಾಡುವಂತೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿದ್ದೇನೆ. 1ನೇ ವಾರ್ಡ್‌ನಿಂದ 4ನೇ ವಾರ್ಡ್‌ವರೆಗೂ ಖಾತಾ ಆಂದೋಲನ ನಡೆಯಿತು.

ಈ ವೇಳೆ ಪೌರಾಯುಕ್ತ ಮಹೇಂದ್ರ, ನಗರಸಭಾ ಸದಸ್ಯರಾದ ಲಕ್ಷ್ಮೀ ಲೋಕೇಶ್, ವಾಸಿಲ್, ಎಂ.ಜೆ.ರೇವಣ್ಣ, ಮತೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನೀಲ್, ಮುಖಂಡರಾದ ನಾಗೇಂದ್ರ, ಕೃಷ್ಣಪ್ಪ, ಬಾಬು ಇತರರು ಹಾಜರಿದ್ದರು.

ಬಾಕ್ಸ್...........

ಶೀಘ್ರದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ನಗರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶೀಘ್ರವಾಗಿ ಚುನಾವಣೆ ನಡೆಸುವಂತೆ ಉಪಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ನಾವೆಷ್ಟೇ ಕೆಲಸ ಮಾಡಿದರೂ ಆಡಳಿತ ಮಂಡಲಿ ಇಲ್ಲವೆಂದರೆ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗುವುದಿಲ್ಲ. ಹಾಗಾಗಿ ಹತ್ತು ದಿನದೊಳಗೆ ದಿನಾಂಕ ಘೋಷಿಸುವ ಆಶಾಭಾವನೆಯಿದೆ. ಎಲ್ಲರೂ ಸೇರಿ ನಗರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಯೋಗೇಶ್ವರ್ ತಿಳಿಸಿದರು.

ಬಾಕ್ಸ್......

ಸರ್ಕಾರಿ ಸ್ವತ್ತುಗಳಿಗೆ ಮೊದಲು ಇ ಸ್ವತ್ತು ಮಾಡಿಸಿ

ಅಧಿಕಾರಿಗಳು ನಗರದಲ್ಲಿರುವ ಎಲ್ಲಾ ಸರ್ಕಾರಿ ಸ್ವತ್ತುಗಳಿಗೆ ಮೊದಲು ಇ-ಖಾತೆ ಮಾಡಿಸಬೇಕು.ಅಧಿಕಾರಿಗಳು ಸರ್ಕಾರಿ ಸ್ವತ್ತುಗಳಿಗೆ ಇ ಖಾತೆ ಮಾಡುವ ಜೊತೆಗೆ ಸರ್ಕಾರಿ ಜಾಗಗಳನ್ನು ಗುರುತಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ಯೋಗೇಶ್ವರ್ ತಾಕೀತು ಮಾಡಿದರು.

ಪೊಟೋ೨೧ಸಿಪಿಟಿ5:

ಚನ್ನಪಟ್ಟಣದ ಮಂಗಳವಾರಪೇಟೆ ಬಳಿಯ ಮರಳುಹೊಲದ ಬಳಿ ಆಯೋಜಿಸಿದ್ದ ಇ-ಖಾತಾ ಆಂದೋಲನ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಮಾತನಾಡಿದರು.

Share this article