ರಾಷ್ಟ್ರೀಯ ಲೋಕ್ ಅದಾಲತ್ ಸದುಪಯೋಗ ಪಡೆದುಕೊಳ್ಳಿ

KannadaprabhaNewsNetwork |  
Published : Jun 07, 2026, 02:00 AM IST
ಫೋಟೋ , 5ಎಚ್‌ಎಸ್‌ಡಿ5 :  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್    | Kannada Prabha

ಸಾರಾಂಶ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಕ್ಷಿದಾರರು ಹಾಗೂ ಸಾರ್ವಜನಿಕರು ತಮ್ಮ ನ್ಯಾಯಾಲಯದ ಪ್ರಕರಣಗಳನ್ನು ಸುಲಭ ಮತ್ತು ಶೀಘ್ರವಾಗಿ ಬಗೆಹರಿಸಿಕೊಳ್ಳಲು ವಿಶೇಷ ಲೋಕ್ ಅದಾಲತ್‍ಗಳು ಅತ್ಯುತ್ತಮ ವೇದಿಕೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಿ.ಜೆ.ಸುದೀನ್ ಕುಮಾರ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಲೋಕ್ ಅದಾಲತ್‍ಗಳನ್ನು ಆಯೋಜಿಸಲಾಗುತ್ತಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

*ಜುಲೈ 11ರಂದು ರಾಷ್ಟ್ರೀಯ ಲೋಕ್ ಅದಾಲತ್: ಜುಲೈ 11ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಜರುಗಲಿದೆ. ಅಂದು ಎಂದಿನಂತೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಅಗತ್ಯವಿರುವ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಕ್ಷಿದಾರರು ತಮ್ಮ ಪ್ರಕರಣಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದಲ್ಲಿ ಎದುರುದಾರರಿಗೆ ನೋಟಿಸ್ ಅಥವಾ ಸೂಚನೆ ಕಳುಹಿಸಿ, ಅವರನ್ನೂ ಆ ದಿನ ಹಾಜರಿರುವಂತೆ ವ್ಯವಸ್ಥೆ ಮಾಡಲಾಗುವುದು. ಕಕ್ಷಿದಾರರು ನೇರವಾಗಿ ಅಥವಾ ತಮ್ಮ ವಕೀಲರ ಮೂಲಕ ಪ್ರಾಧಿಕಾರವನ್ನು ಸಂಪರ್ಕಿಸಿ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಒಳಪಡಿಸಬಹುದು ಎಂದು ತಿಳಿಸಿದರು.

*ಜುಲೈ 18ಕ್ಕೆ ಚೆಕ್ ಬೌನ್ಸ್ ಪ್ರಕರಣಗಳ ವಿಶೇಷ ಅದಾಲತ್:

ಲಿಖಿತ ವರ್ಗಾವಣೆಯ ಅಧಿನಿಯಮದ ಪ್ರಕರಣಗಳಿಗಾಗಿಯೇ ಜು.18ಕ್ಕೆ ವಿಶೇಷ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಶೀಘ್ರ ಪರಿಹಾರ ಬಯಸುವ ಹಾಗೂ ರಾಜಿ ಮಾಡಿಕೊಳ್ಳಲು ಇಚ್ಛಿಸುವ ದೂರುದಾರರು ಮತ್ತು ಆರೋಪಿಗಳು ಈ ವಿಶೇಷ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕೊಳ್ಳಬಹುದು ಎಂದರು.

ಸರ್ವೋಚ್ಛ ನ್ಯಾಯಾಲಯ ಆ.21, 22 ಮತ್ತು 23ರಂದು ‘ಸಮಾಧಾನ್ ಸಮಾರೋಹ್ 2026’ ಹೆಸರಿನಲ್ಲಿ ರಾಜಿ ಸಂಧಾನ ಮತ್ತು ಮಧ್ಯಸ್ಥಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಪೂರ್ವಭಾವಿಯಾಗಿ, ಜಿಲ್ಲಾ ನ್ಯಾಯಾಲಯ ಮತ್ತು ಅದರ ಅಧೀನ ನ್ಯಾಯಾಲಯಗಳಿಂದ ವಿಲೇವಾರಿಯಾಗಿ, ಉಚ್ಚ ನ್ಯಾಯಾಲಯದ ಮೂಲಕ ಸರ್ವೋಚ್ಛ ನ್ಯಾಯಾಲಯದಲ್ಲಿ ಸದ್ಯ ಅಪೀಲುಗಳಲ್ಲಿ ಬಾಕಿ ಇರುವ 32 ಪ್ರಕರಣಗಳ ಪಟ್ಟಿಯನ್ನು ರಾಜ್ಯ ಪ್ರಾಧಿಕಾರದಿಂದ ಇಲ್ಲಿಗೆ ಕಳುಹಿಸಿಕೊಡಲಾಗಿದೆ. ಈಗಾಗಲೇ ಈ 32 ಪ್ರಕರಣಗಳ ಪಕ್ಷಗಾರರಿಗೆ ಮತ್ತು ಅವರ ವಕೀಲರಿಗೆ ಮಾಹಿತಿ ನೀಡಿ, ಅವರನ್ನು ಮಧ್ಯಸ್ಥಿಕೆಗಾರರ ಮುಂದೆ ಹಾಜರುಪಡಿಸಿ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಪ್ರಕ್ರಿಯೆ ಮುಗಿದ ನಂತರ ಇದರ ವರದಿಯನ್ನು ರಾಜ್ಯ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಜಿಲ್ಲೆಯ ಆಯಾ ತಾಲೂಕು ಕಾನೂನು ಸೇವಾ ಸಮಿತಿಗಳು ಹಾಗೂ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಬಹುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ತಡೆಗೆ ಒತ್ತಾಯ
ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಸ್ಟಾರ್ಟಪ್‌ ಕಾನ್‌ಕ್ಲೇವ್‌