ಮಹಿಳೆಯರು ಶಿಕ್ಷಿತರಾಗಿ ಸಿಕ್ಕ ಅವಕಾಶ ಬಳಸಿಕೊಳ್ಳಿ

KannadaprabhaNewsNetwork | Published : Jun 27, 2024 1:06 AM

ಸಾರಾಂಶ

ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಜೊತೆಗೆ ಪರುಷ ಪ್ರಧಾನವಾದ ಇಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಸಾಧಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮಹಿಳೆಯರಿಗೆ ಕರೆ ನೀಡಿದರು.

ಕನ್ನಡಪ್ರ ವಾರ್ತೆ ಕಲಬುರಗಿ

ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಜೊತೆಗೆ ಪರುಷ ಪ್ರಧಾನವಾದ ಇಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಸಾಧಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮಹಿಳೆಯರಿಗೆ ಕರೆ ನೀಡಿದರು. ನಾಲ್ಕು ದಿನಗಳ ಪ್ರವಾಸಕ್ಕೆ ಕಲಬುರಗಿಗೆ ಆಗಮಿಸಿರುವ ಅವರು ಅಫಜಲ್ಪುರ ತಾಲೂಕಿನ ಗೊಬ್ಬುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಮಹಿಳಾ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಾಕ್ಷರತೆ ಕೊರತೆಯೆ ಮಹಿಳೆಯರ ಹಿಂದುಳಿವಿಕೆಗೆ ಪ್ರಮುಖ ಕಾರಣವಾಗಿದೆ. ಮೊದಲು ಸಾಕ್ಷರರಾಗಬೇಕಿದೆ. ಸಾಕ್ಷರತೆಯಿಂದ ಮಾತ್ರ ಪ್ರಗತಿ ಸಾಧ್ಯ ಎಂದ ಅವರು, ತಾನು ಬೆಂಗಳೂರಿನ ಮಗಳಾದರು ಕಲಬುರಗಿ ಸೊಸೆಯಾಗಿರುವೆ. ಕಳೆದ 12 ವರ್ಷ ಇಲ್ಲಿನ ಎಚ್.ಕೆ.ಇ ಸಂಸ್ಥೆಯ ಡೆಂಟಲ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿರುವೆ ಎಂದು ತಮ್ಮ ಕಲಬುರಗಿ ನಂಟು ಬಿಚ್ಚಿಟ್ಟರು.

ಇತ್ತೀಚೆಗೆ ಮಹಿಳೆಯರಲ್ಲಿ ಸ್ತನ, ಗರ್ಭ ಕ್ಯಾನ್ಸರ್ ಹೆಚ್ಚುತ್ತಿದ್ದು, ಇಂತಹ ಆರೋಗ್ಯ ಶಿಬಿರಗಳ ಮೂಲಕ ಉಚಿತ ಚಿಕಿತ್ಸೆ ಪಡೆಯಬೇಕು. ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕೆ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಲಾಭ ಪಡೆದು ಜೀವನದಲ್ಲಿ ಮುಂದೆ ಬರಬೇಕೆಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ ಅಧ್ಯಕ್ಷರು ಶಿಬಿರದಲ್ಲಿ ಭಾಗವಹಿಸಿದ ಮಹಿಳೆಯರೊಂದಿಗೆ ಆತ್ಮೀಯವಾಗಿ ಸಂವಾದ ಕೈಗೊಂಡರು.

ಇದಕ್ಕು ಮುನ್ನ ಆರೋಗ್ಯ ಕೇಂದ್ರದ ಹೆರಿಗೆ ಕೋಣೆ, ಲೇಬರ್ ರೂಂ, ಓ.ಪಿ.ಡಿ ಹೀಗೆ ವಿವಿಧ ಕೋಣೆ ಭೇಟಿ ನೀಡಿದ ಅಧ್ಯಕ್ಷರು ರೋಗಿಗಳ ಆರೋಗ್ಯ ವಿಚಾರಿಸಿದರು.

ನಂತರ ಪಾಣೆಗಾಂವ ಮತ್ತು ಪಾಣೆಗಾಂವ ತಾಂಡಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಡಾ.ನಾಗಲಕ್ಷ್ಮೀ ಚೌಧರಿ ಅವರು, ಪುಟಾಣಿ ಮಕ್ಕಳು, ಗರ್ಭಿಣಿ-ಬಾಣಂತಿ ಮಹಿಳೆಯರಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ಥಳೀಯ ಸಿಬ್ಬಂದಿಯೊಬ್ಬರು ಅಂಗನವಾಡಿ ಕೇಂದ್ರಕ್ಕೆ ಇದೂವರೆಗೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ ಎಂದು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷರು, ವಿದ್ಯುತ್ ಇಲ್ಲ ಅಂದರೆ ಮಕ್ಕಳ ಪಾಲನೆ ಪೋಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪಿ.ಡಿ.ಓ ಗೆ ನಿರ್ದೇಶನ ನೀಡಿದಲ್ಲದೆ ಸೋರುತ್ತಿರುವ ಅಂಗನವಾಡಿಯ ದುರಸ್ತಿ ಸಹ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಡಿ.ಸಿ.ಪಿ.ಓ ಮಂಗಳಾ ಪಾಟೀಲ, ಪ್ರಭಾರಿ ಡಿ.ಎಚ್.ಓ ಡಾ.ಸುರೇಶ ಮೇಕಿನ್, ಜಿಲ್ಲಾ ಆರ್.ಸಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರತಿಕಾಂತಿ, ತಾಪಂ ಇ.ಓ ವೀರಣ್ಣ ಕೌಲಗಿ, ಟಿ.ಎಚ್.ಓ ಡಾ.ರವಿ ಬಿರಾದಾರ, ಸ್ಥಳೀಯ ವೈದ್ಯಾಧಿಕಾರಿ ಡಾ.ಅಪರ್ಣಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಇದ್ದರು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆರೋಗ್ಯ ತಪಾಸಣೆಗೆ ಒಳಗಾದರು.

ಕೇಂದ್ರ ಕಾರಾಗೃಹಕ್ಕೆ ಭೇಟಿ: ನಂತರ ಮಹಿಳಾ ಆಯೋಗದ ಅಧ್ಯಕ್ಷರು ಕಲಬುರಗಿಯ ನಂದಿಕೂರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿ ಬಂಧಿಯಾದ ಮಹಿಳಾ ಕೈದಿಗಳನ್ನು ಭೇಟಿಯಾಗಿ ಮಾತನಾಡಿಸಿದರು. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ, ಸಹಾಯಕ ಅಧೀಕ್ಷಕ ಬಿ.ಸುರೇಶ ಇದ್ದರು.

Share this article