ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತ ಸರ್ಕಾರ, ಎಂಎಸ್ಎಂಇ, ಮತ್ತು ಅಂಚೆ ಇಲಾಖೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ಟೂಲ್‌ಕಿಟ್ ವಿತರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಿಸಿ ಮಾತನಾಡಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಉತ್ಪಾದಿಸಬಹುದು ಎಂಬುದನ್ನು ವಿಶ್ವಕರ್ಮ ಯೋಜನೆಯಲ್ಲಿ ಹೇಳಿಕೊಡಲಾಗುತ್ತದೆ. ಹಳೇ ಕಾಲದ ವಿನ್ಯಾಸದಂತೆಯೇ ಉತ್ಪನ್ನಗಳನ್ನು ತಯಾರಿಸಿದರೆ ಅದಕ್ಕೆ ಬೇಡಿಕೆ ಬರದೇ ಹೋಗಬಹುದು. ಉದಾಹರಣೆಗೆ, ಈಗಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆಗಳನ್ನು ತಯಾರಿಸಿದರೆ ಅದಕ್ಕೆ ಉತ್ತಮ ಬೆಲೆ ಹಾಗೂ ಬೇಡಿಕೆ ಸಿಗುತ್ತದೆ. ಇಂತಹ ಯೋಜನೆಯನ್ನು ಬಳಸಿಕೊಳ್ಳಬೇಕು. ಯುವಜನರು ಉದ್ಯೋಗ ಅರಸದೆ ಉದ್ಯೋಗ ನೀಡುವವರಾಗಬೇಕು ಎಂದು ಕರೆ ನೀಡಿದರು.
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಬೇರೆ ಉದ್ಯೋಗ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಶಿಲ್ಪ ವೃತ್ತಿಯನ್ನೇ ಆರಿಸಿಕೊಂಡು ಪ್ರಾವೀಣ್ಯತೆ ಪಡೆದುಕೊಂಡರು. ತಮ್ಮ ವೃತ್ತಿಯಲ್ಲಿ ವಿಭಿನ್ನವಾದ ಕೌಶಲ್ಯ ಬೆಳೆಸಿಕೊಂಡಿರುವುದರಿಂದ ಅವರಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ತೆಲಂಗಾಣದ ಮೆಹಬೂಬ್‌ನಗರದ ಕ್ಷೌರಿಕ ಅಶ್ವಿನಿ ರಾಮಕೃಷ್ಣ ರಸ್ತೆಬದಿಯಲ್ಲಿ ಸಲೂನ್ ಇಟ್ಟುಕೊಂಡಿದ್ದರು. ಅದು ಹಳೆಯದಾಗಿದ್ದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿರಲಿಲ್ಲ. ಅವರು ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದು, ಯುವಸಮೂಹವನ್ನು ಆಕರ್ಷಿಸುವಂತೆ ಕ್ಷೌರದಂಗಡಿ ನಿರ್ಮಿಸಿದರು. ಈಗ ಅನೇಕ ಗ್ರಾಹಕರು ಅವರ ಅಂಗಡಿಗೆ ಬರುತ್ತಿದ್ದು, ಆ ಊರಿನಲ್ಲಿ ಬಹಳ ಖ್ಯಾತಿ ಪಡೆದಿದ್ದಾರೆ ಎಂದರು.ಕರಕುಶಲ ವೃತ್ತಿಯಲ್ಲಿ ಇರುವವರು ವಹಿವಾಟನ್ನು ಇನ್ನಷ್ಟು ಬೆಳೆಸಿಕೊಳ್ಳಲು ಹಾಗೂ ತರಬೇತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿ ಮಾಡಿದೆ. ಇದರಡಿ ಆರಂಭಿಕ ಹಂತದಲ್ಲಿ 1 ಲಕ್ಷ ರೂ. ಹಾಗೂ ನಂತರ ಒಟ್ಟು 2 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಕರಕುಶಲ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಹೆಗ್ಗುರುತು. ಕಮ್ಮಾರ, ಬಡಗಿ, ಶಿಲ್ಪಿ, ಅಕ್ಕಸಾಲಿಗರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ ತಯಾರಕರು, ಬೊಂಬೆ ತಯಾರಕರು ಹೀಗೆ ಅನೇಕ ಉದ್ಯೋಗಿಗಳು ನಮ್ಮ ಸಮಾಜದ ಬೆನ್ನುಲುಬು. ಆದರೆ ಈ ಸಮುದಾಯ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಅನೇಕರು ಅರಿತಿಲ್ಲ. ಇದನ್ನು ಅರಿತು ಅವರಿಗೆ ಗೌರವ ನೀಡಬೇಕು ಎಂದರು.
ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಅಕ್ಕಿಪೇಟೆ, ಚಿಕ್ಕಪೇಟೆ, ಬಳೇಪೇಟೆ, ಅರಳೇಪೇಟೆ ಸೇರಿ ಸುಮಾರು 50 ಪೇಟೆಗಳನ್ನು ನಿರ್ಮಿಸಿದ್ದರು. ವಂಶಪಾರಂಪರ್ಯವಾಗಿ ಕರಕುಶಲ ವೃತ್ತಿ ಮಾಡುತ್ತಾ ಬಂದವರಿಗೆ ಅವರು ಸಂತೆಗಳನ್ನು ನಿರ್ಮಿಸಿದ್ದರು. ಗ್ರಾಮೀಣ ಸ್ವಾವಲಂಬನೆ ಬಗ್ಗೆ ಹೇಳಿದ್ದ ಮಹಾತ್ಮ ಗಾಂಧೀಜಿ, ಕರಕುಶಲಕರ್ಮಿಗಳಿಂದ ಗ್ರಾಮೀಣ ಆರ್ಥಿಕತೆ ಬೆಳೆಯುತ್ತದೆ ಎಂದು ನಂಬಿದ್ದರು. ಸ್ಥಳೀಯ ಉದ್ಯಮಗಳನ್ನು ಬೆಳೆಸುವುದು ಅವರ ಆದ್ಯತೆಯಾಗಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕರಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ಒತ್ತು ನೀಡಿದ್ದಾರೆ.
ಪ್ರತಿ ಕರಕುಶಲ ಕರ್ಮಿಗಳ ಜೊತೆ ನಾನು ಸಂವಾದ ಮಾಡಿ, ಎಲ್ಲರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇನೆ. ಈ ಕಾರ್ಯಕ್ರಮದ ವೇಳೆಯಲ್ಲಿ ಕಾರ್ಮಿಕ ಸಂಘಟನೆಯವರು ನನ್ನನ್ನು ಭೇಟಿ ಮಾಡಿ, 1600 ಸದಸ್ಯರಿಗೆ ತರಬೇತಿ ಹಾಗೂ ಸಾಲ ಕೊಡಿಸಿ ಎಂದು ಕೋರಿದ್ದಾರೆ. ಇಂತಹ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಈ ರೀತಿ ಎಲ್ಲರಲ್ಲೂ ಜಾಗೃತಿ ಬರುತ್ತದೆ ಎಂದರು.
ಈ ವೇಳೆ ಎಂಎಸ್ಎಂಇ ನಿರ್ದೇಶಕ ದೇವರಾಜ್, ಅಂಚೆ ಇಲಾಖೆಯ ಉಪ ನಿರ್ದೇಶಕ ದಯಾನಂದ್, ಸಹಾಯಕ ನಿರ್ದೇಶಕ ನರಸಿಂಹನ್,ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೆಂಕಟಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಮುನಿರಾಜು, ಸಂತೋಷ್, ಬಾಬು, ಶಶಿಕುಮಾರ್, ಶ್ರೀನಾಥ್, ರಾಮಣ್ಣ, ಅನಿಲ್,ಅಂಚೆ ಸಿಬ್ಬಂದಿ, ಫಲಾನುಭವಿಗಳು ಹಾಜರಿದ್ದರು.