ಬರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಸುಶೀಲಾ

KannadaprabhaNewsNetwork | Published : Feb 22, 2024 1:46 AM

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಡಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿನ ಕುಡಿವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಪೂರೈಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರು ಪೂರೈಸುವ ಮೂಲಕ ಜಿಲ್ಲೆ ಬರ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ತಹಸೀಲ್ದಾರರು ಸ್ಥಳೀಯ ಶಾಸಕರೊಂದಿಗೆ ತಪ್ಪದೇ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ 6 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ನೀರು ಸರಬರಾಜು ಕುರಿತಂತೆ ಅಧಿಕಾರಿಗಳು ಆಯಾ ಗ್ರಾಮಗಳ ಜನರಿಗೆ ಸಂಪರ್ಕಿಸಿ ನೀರಿನ ಸಮಸ್ಯೆ ಪರಿಹಾರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಯಾಗುತ್ತೀರಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಗ್ರಾಮವಾರು ಜನರಿಗೆ ಕುಡಿವ ನೀರು ದಿನನಿತ್ಯ ಲಭ್ಯವಾಗುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಕುಡಿವ ನೀರಿನ ಸಮಸ್ಯೆ ಪರಿಹರಿಸುವ ಕುರಿತಂತೆ ಆಯಾ ಗ್ರಾಪಂ ಮೂಲಕ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಬೇಕು. ಕೆಳ ಮಟ್ಟದ ಅಧಿಕಾರಿಗಳ ಮೇಲೆ ಅವಲಂಬನೆಯಾಗದೆ ಖುದ್ದಾಗಿ ಭೇಟಿ ನೀಡಿ ನೈಜ ಸ್ಥಿತಿ ಆಧಾರದ ಮೇಲೆ ಶುದ್ಧ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಆರ್ಸೆನಿಕ್, ಪ್ಲೋರೈಡ್‌ ಪ್ರದೇಶ ಗುರುತಿಸಿ ಜನರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕುಡಿವ ನೀರಿಗೆ ಚರಂಡಿ ನೀರು ಸೇರಿ ಕಲುಷಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿವ ನೀರಿಗೆ ಸಂಬಂಧಿಸಿದಂತೆ ಬಾಕಿ ಕಾಮಗಾರಿ ಆದ್ಯತೆ ಮೇಲೆ ಪೂರ್ಣಗೊಳಿಸಲು ವಿಶೇಷ ಗಮನ ಹರಿಸಬೇಕು. ಕುಡಿಯುವ ನೀರಿನ ಮೂಲಗಳಾದ ಬೋರ್ ವೆಲ್, ಪ್ಲೇಸಿಂಗ್ ಸೇರಿ ಇನ್ನಿತರ ಮುಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ನಗರಸಭೆ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಕುಡಿಯುವ ನೀರು ಪೂರೈಕೆ ಬಗ್ಗೆ ಸೂಕ್ತ ನಿಗಾ ವಹಿಸಬೇಕು ಎಂದರು.

ಜಾನುವಾರು ಹಾನಿ ಪರಿಹಾರ ವಿತರಣೆ, ಅದರಂತೆ ರೈತರಿಗೆ ನೀಡಲಾದ ಇನ್ಪುಟ್ ಸಬ್ಸಿಡಿ ಕುರಿತಂತೆ ಹಾಗೂ ಪಶುಸಂಗೋಪನ ಇಲಾಖೆ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಲಭ್ಯವಿರುವ ಮೇವಿನ ಕುರಿತು ಅವಶ್ಯಕ ಮಾಹಿತಿ ಪಡೆದರು ಅದರಂತೆ ಜಲಾಶಯಗಳಿಂದ ಬಿಡಲಾಗಿರುವ ನೀರಿನ ಪ್ರಮಾಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಯಾದಗಿರಿ ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ, ಪಶುಪಾಲನೆ ಇಲಾಖೆ ಅಧಿಕಾರಿ ಡಾ.ರಾಜು ದೇಶಮುಖ, ಯಾದಗಿರಿ ತಹಶಿಲ್ದಾರ ನಾಗಮ್ಮ ಕಟ್ಟಿಮನಿ ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಅಧಿಕಾರಿಗಳು ತಹಸೀಲ್ದಾರ, ತಾಪಂ ಇಓ ಉಪಸ್ಥಿತರಿದ್ದರು.

Share this article