ಅಧಿಕಾರಿಗಳ ಮೇಲ್ವಿಚಾರಣ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಸೂಚನೆ । ಜಾನುವಾರುಗಳಿಗೆ ಮೇವು ಸಮಸ್ಯೆಯಾಗದಿರಲಿ
ಕನ್ನಡಪ್ರಭ ವಾರ್ತೆ ಹೊನ್ನಾಳಿಹೊನ್ನಾಳಿ-ನ್ಯಾಮತಿ ತಾಲೂಕುಗಳ ಈಗಾಗಲೇ ಬರಪೀಡಿತ ಪಟ್ಟಿಗೆ ಸೇರಿಸಿದ್ದು, ಕಂದಾಯ ಸಚಿವರು ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಸಮಸ್ಯೆ ಉಂಟಾಗದಂತೆ ಪ್ರತಿ 15 ದಿನಕ್ಕೊಮ್ಮೆ ಕ್ಷೇತ್ರದ ಶಾಸಕರು ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದ್ದಾರೆ ಈ ಹಿನ್ನೆಲೆಯಲ್ಲಿ ಮೇಲ್ವಿಚಾರಣ (ಟಾಸ್ಕ್‌ಫೋರ್ಸ್) ಸಭೇ ಕರೆಯಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ ಸಾಮಾನ್ಯವಾಗಿ ಅವಳಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಇಲ್ಲ, ಅದಕ್ಕೆ ಕಾರಣ ತಾಲೂಕಿನ ಪಕ್ಕದಲ್ಲಿ ತುಂಗಾಭದ್ರಾ ನದಿ ಜೊತೆಗೆ ತುಂಗಾ ಮತ್ತು ಭದ್ರಾ ಚಾನಲ್ ಇರುವ ಕಾರಣ ಕೊಳವೆ ಬಾವಿಗಳ ಅಂತರ್ಜಲ ನಮಸ್ಯೆ ಅಷ್ಟೇನು ತೀವ್ರವಾಗಿಲ್ಲ ಆದಾಗ್ಯೂ ನೀರಿನ ಸಂಪನ್ಮೂಲಗಳಿದ್ದರೂ ಜನರಿಗೆ ತಲುಪಿಸುವಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಇಂತಹ ಸಮಸ್ಯೆಗಳ ಆಯಾಯಾ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಕುಡಿಯುವ ನೀರು ಮತ್ತು ಮೇವು ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಆಗಿರುತ್ತದೆ ಎಂದು ಪಿಡಿಒಗಳಿಗೆ ತಾಕೀತು ಮಾಡಿದರು.ಅವಳಿ ತಾಲೂಕಿನಲ್ಲಿ ಜೆಜೆಎಂ ಯೋಜನೆ ವಿಫಲ:
ನ್ಯಾಮತಿ ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ವಿಫಲವಾಗಿದ್ದು, ಕೆಲ ಕಾರಣಗಳಿಂದ ಜನರೇ ಇವುಗಳ ಉಪಯೋಗಿಸುತ್ತಿಲ್ಲ ಎಂದಾಗ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಅವರು ಅವಳಿ ತಾಲೂಕಿನಲ್ಲಿ ಸುಮಾರು ₹60 ಕೋಟಿ ವೆಚ್ಚದಲ್ಲಿ ಜೆ.ಜೆ.ಎಂ. ಅಡಿಯಲ್ಲಿ ಕಾಮಗಾರಿಗಳು ಜರುಗಿವೆ ಎಂದು ಮಾಹಿತಿ ನೀಡಿದರು.ಜಲಜೀವನ ಮಷಿನ್ (ಜೆ.ಜೆ.ಎಂ.) ಯೋಜನೆಯಡಿ ಹಾಕಿರುವ ನಲ್ಲಿಗಳಲ್ಲಿ ಬಹಳ ಸಣ್ಣದಾಗಿ ನೀರು ಬರುವುದರಿಂದ ಜನರು ಕಾದು ನೀರು ಸಂಗ್ರಹಿಸುವ ತಾಳ್ಮೆ ಇಲ್ಲ, ಇದೇನಿದ್ದರೂ ತೀವ್ರ ಬರಗಾಲ ಇರುವ ಜಿಲ್ಲೆಗಳಲ್ಲಿ ಜನರಿಗೆ ನೀರು ಸಿಗುವುದೇ ದುರ್ಲಭವಾದ ಪ್ರದೇಶದಲ್ಲಿ ತಾಳ್ಮೆಯಿಂದ ನೀರು ಹಿಡಿಯುತ್ತಾರೆ ಅಂತಹ ಕಡೆಗಳಲ್ಲಿ ಮಾತ್ರ ಇಂತಹ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಶಾಸಕರು ಹೇಳಿದರು.
ಸಭೆಯಲ್ಲಿ ತಾಲೂಕುಗಳ ಪಿಡಿಒಗಳು ತಮ್ಮ ಗ್ರಾಮ ಪಂಚಾಯಿತಿ ಹಂತಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು 46 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು 9 ಜನ ಪಿಡಿಒಗಳ ಕೊರತೆ ಇದೆ ಇದೆ ಎಂದು ಸಭೆಯ ಗಮನಕ್ಕೆ ತರಲಾಯಿತು.ಸಭೆಯಲ್ಲಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜ ಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ ಸೇರಿ ಅವಳಿ ತಾಲೂಕುಗಳ ಪಿಡಿಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಿ: ಶಾಸಕ ಸೂಚನೆಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಖಾಸಗಿ ಕಂಪನಿಗೆ ನೀಡಿದ್ದು, ಈ ಕಂಪನಿಯವರು ಸಕಾಲದಲ್ಲಿ ವಿದ್ಯುತ್ ಬಿಲ್ ಬೆಸ್ಕಾಂನವರಿಗೆ ಕಟ್ಟದೆ ತೊಂದರೆಯಾಗುತ್ತಿದೆ ಎಂದು ಹಲವು ಮಂದಿ ಪಿಡಿಒಗಳು ಸಭೆಯ ಗಮನಕ್ಕೆ ತಂದಾಗ ಬೆಸ್ಕಾಂ ಅಧಿಕಾರಿಗಳಾದ ಜಯಪ್ಪ ಮಾತನಾಡಿ ಅವಳಿ ತಾಲೂಕುಗಳಿಂದ ಸುಮಾರು ₹35 ಲಕ್ಷಕ್ಕೂ ಹೆಚ್ಚಿನ ಮೊತ್ತದ ಬಿಲ್ ಬಾಕಿ ಇದೆ ಎಂದು ಮಾಹಿತಿ ನೀಡಿದರು. ಕೂಡಲೇ ಶಾಸಕರು ಸಭೆಯಲ್ಲಿ ಹಾಜರಿದ್ದ ಖಾಸಗಿ ಕಂಪನಿಯ ಪ್ರತಿನಿಧಿಗೆ ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕು, ಜೊತೆಗೆ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕೂಡ ಕಾಲ ಕಾಲಕ್ಕೆ ಮಾಡಬೇಕು ಎಂದು ಸೂಚಿಸಿದರು.