ಕನ್ನಡಪ್ರಭ ವಾರ್ತೆ ಮದ್ದೂರು
ಪ್ರತಿಯೊಬ್ಬರು ತಮ್ಮ ಕುಟುಂಬದ ರಕ್ಷಣೆ ಮಾಡಿಕೊಳ್ಳುವಂತೆ ಪರಿಸರ ಸಂರಕ್ಷಣೆಗೂ ಕಾಳಜಿ ವಹಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ತಾಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಮಂಗಳವಾರ ವನಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಜವಾಬ್ದಾರಿ ತಮ್ಮ ತಮ್ಮ ಮನೆಗಳಿಂದಲೇ ಆದಾಗ ಮಾತ್ರ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯವರು ನಿರ್ಭೀತಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.
ವರ್ಷ ಪೂರ್ತಿ ಮರಗಳನ್ನು ಕಡಿದು ಪರಿಸರ ದಿನದಂದು ನಾಲ್ಕು ಗಿಡಗಳನ್ನು ನೆಡುವುದಲ್ಲ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ನಗರೀಕರಣ, ಪರಿಸರ ಮಾಲಿನ್ಯ ದಿನೇ ದಿನೇ ಅದರೊಂದಿಗೆ ಬೆರೆಯುತ್ತಿದ್ದು, ಇದು ಆತಂಕಕಾರಿ ಸಂಗತಿಯಾಗಿದೆ ಎಂದು ಎಚ್ಚರಿಸಿದರು.ಅಭಿವೃದ್ಧಿ ಮತ್ತು ವಿನಾಶ ಒಟ್ಟಿಗೆ ಸಾಗಬಾರದು. ಇರುವ ಒಂದು ಭೂಮಿ ರಕ್ಷಿಸಲು ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕು. ಪರಿಸರ ಸ್ವಚ್ಛತೆಯ ಬಗ್ಗೆ ನಾವುಗಳು ಸೇರಿದಂತೆ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ನಮ್ಮ ನಮ್ಮ ಜವಾಬ್ದಾರಿ ಅರಿತು ನಡೆದಾಗ ಮಾತ್ರ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಿದಂತಾಗುತ್ತದೆ ಎಂದರು.
ಇದೇ ವೇಳೆ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಶೈಲೇಂದ್ರ ಕುಮಾರ್, ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಉಪ ವಲಯ ಅರಣ್ಯಾಧಿಕಾರಿ ರವಿ, ಕಾಂತರಾಜು, ಶಿವರಾಜ್, ಪ್ರಾಂಶುಪಾಲ ಪ್ರಕಾಶ್ ಬಾಬು, ಉಪನ್ಯಾಸಕರಾದ ಚನ್ನಂಕೇಗೌಡ, ಪ್ರತಾಪ್, ಸಿಬ್ಬಂದಿ ಸುದರ್ಶನ್, ಸಿದ್ದೇಗೌಡ, ಪಿಡಿಒ ಶಂಭುಲಿಂಗಯ್ಯ, ಗ್ರಾಪಂ ಸದಸ್ಯ ಪ್ರೀತಂ, ಹನುಮೇಗೌಡ, ಮುಖಂಡರಾದ ಅಪ್ಪೇಗೌಡ, ರಾಜೇಂದ್ರ, ಸುದೀ ಮತ್ತಿತರರು ಇದ್ದರು.11, 12 ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ನಾಗಮಂಗಲ:ಪಟ್ಟಣದ ಟಿ.ಬಿ.ಬಡಾವಣೆಯಿಂದ ಕೋಟೆಬೆಟ್ಟ ರಸ್ತೆಯ ಸರಸ್ವತಿಪುರದವರೆಗೆ ಮೈಲಾರಪಟ್ಟಣ ಎನ್‌ಜೆವೈ 11ಕೆವಿ ಮಾರ್ಗದ ಎಬಿ ಕೇಬಲ್ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 11,12 ರಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ತಾಲೂಕಿನ ಟಿ.ಬಿ. ಬಡಾವಣೆಯ ಬದರಿಕೊಪ್ಪಲು, ಕೋಟೆಬೆಟ್ಟ ರಸ್ತೆ, ಪಾಲಗ್ರಹಾರ, ಕಸುವಿನಹಳ್ಳಿ, ಕೋಟೆಬೆಟ್ಟ, ಹೊಸಹಳ್ಳಿ, ಬ್ಯಾಡರಹಳ್ಳಿ, ಅರಸೇಗೌಡನಕೊಪ್ಪಲು, ಹಾಲ್ತಿ, ಚಿನ್ನೇಗೌಡನಕೊಪ್ಪಲು, ವೀರಸಂದ್ರ, ಕೊಡಗಹಳ್ಳಿ, ಯಗಟಹಳ್ಳಿ, ಕಾರಗೆರೆ, ಮೈಲಾರಪಟ್ಟಣ, ಗೊಗ್ಗನಕೊಪ್ಪಲು, ಕಲ್ಲುವೀರನಕೊಪ್ಪಲು, ಅರಟ್ಟಿಕೊಪ್ಪಲು, ಗೊಲ್ಲರಹಟ್ಟಿ ಮತ್ತು ಕೆರೆಮೇಗಲಕೊಪ್ಪಲು ಗ್ರಾಮಗಳಿಗೆ ಜು.11 ಮತ್ತು 12ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾಗಮಂಗಲ ಸೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಎಇಇ ಕೋರಿದ್ದಾರೆ.