ಕನ್ನಡಪ್ರಭ ವಾರ್ತೆ ಹಾಸನ
ಸಾರ್ವಜನಿಕರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯದ ಕೊರತೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸುವಂತೆ ಶಾಸಕ ಎಚ್.ಡಿ ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಾಸನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದುದ್ದ ಮತ್ತು ಶಾಂತಿಗ್ರಾಮ ಹೋಬಳಿಯ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆ ನಡೆಸಿ ಪ್ರತಿ ಇಲಾಖೆಗಳ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರಾರಂಭಿಸಿರುವ ಜೆಜೆಎಂ ಕಾರ್ಯಗಳು ಮುಗಿದ ಮೇಲೆ ರಸ್ತೆಗಳು ಮತ್ತು ಇನ್ನಿತರ ಕಡೆಗಳಲ್ಲಿ ತೆಗೆದಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಕೊರತೆಯಾಗದಂತೆ ಎಚ್ಚರವಹಿಸಿ ಹಾಗೂ ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.
ಸರ್ಕಾರಿ ಶಾಲಾ ಕಾಲೇಜು ಆಸ್ತಿ ಗಳ ಸಂರಕ್ಷಣೆಗೆ ನಿಗಾವಹಿಸಿ ಖಾತೆ ಮಾಡುವಂತೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಹೇಳಿದರು.ವಿದ್ಯುತ್‌ಗೆ ಸಂಬಂಧಿಸಿದಂತೆ ವಿದ್ಯುತ್ ತಂತಿ, ಟಿ.ಸಿ. ದುರಸ್ತಿ ಸಮಸ್ಯೆಗಳು ಇರುವಂತಹ ಗ್ರಾಮ ಪಂಚಾಯಿತಿಗಳ ಪಟ್ಟಿ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ಕೃಷಿ ಚಟುವಟಿಕೆಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಮುಂಜಾಗ್ರತಾ ಕ್ರಮವಾಗಿ ರಸಗೊಬ್ಬರಗಳ ದಾಸ್ತಾನು ನೀಡುವಂತೆ ಕೃಷಿ ಅಧಿಕಾರಿಗಳಿಗೆ ತಿಳಿಸಿದರು.ಅರಣ್ಯ ಇಲಾಖೆಯವರು ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಪಾಡುವಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು.
ಗ್ರಾಮ ಲೆಕ್ಕಧಿಕಾರಿಗಳು ಹಿರಿಯ ನಾಗರಿಕರಿಗೆ ಸಕಾಲದಲ್ಲಿ ವೃದ್ಧಾಪ್ಯ ವೇತನ ಹಾಗೂ ಪಿಂಚಣಿಯನ್ನು ನೀಡಬೇಕು ಎಂದು ಹೇಳಿದರು.ತಹಸೀಲ್ದಾರ್ ಶ್ವೇತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಎಚ್.ಡಿ., ಎ.ಡಿ.ಎಲ್.ಆರ್. ಅಧಿಕಾರಿ ಸಂಶುದ್ದೀನ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.