22 ಕೆರೆಗಳಿಗೆ ನೀರು ತುಂಬಿಸಲು ನಿಗಾ ವಹಿಸಿ: ಬಸವಂತಪ್ಪ

KannadaprabhaNewsNetwork |  
Published : Jun 23, 2024, 02:00 AM IST
ಕ್ಯಾಪ್ಷನಃ21ಕೆಡಿವಿಜಿ39, 40ಃದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಜಾಕ್ ವೆಲ್ ಕಮ್ ಪಂಪ್ ಹೌಸ್ ನಂ.2 ಗೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಈ ಬಾರಿ ಮುಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಿರ್ವಹಣೆ ಮಾಡುವ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದ್ದಾರೆ.

- ಮಲ್ಲಶೆಟ್ಟಿಹಳ್ಳಿ ಜಾಕ್ ವೆಲ್ ಕಂ ಪಂಪ್ ಹೌಸ್-2ಗೆ ಭೇಟಿ ನೀಡಿ ಪರಿಶೀಲನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಈ ಬಾರಿ ಮುಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಿರ್ವಹಣೆ ಮಾಡುವ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಸೂಚನೆ ನೀಡಿದರು.

ತಾಲೂಕಿನ ಮಲ್ಲಶೆಟ್ಟಿಹಳ್ಳಿ ಬಳಿಯ ಜಾಕ್ ವಾಲ್ ಕಂ ಪಂಪ್ ಹೌಸ್ ನಂ-2ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಅವರು ಮಾತನಾಡಿದರು.

ರಾಜನಹಳ್ಳಿ ಬಳಿಯ ಮೊದಲ ಜಾಕ್ ವೆಲ್‌ನಿಂದ ಮಲ್ಲಶೆಟ್ಟಿಹಳ್ಳಿ ಬಳಿಯಿರುವ ಎರಡನೇ ಜಾಕ್ ವೆಲ್‌ನ ಕೆರೆಗೆ ನೀರು ಹರಿಸಲಾಗುತ್ತಿದೆ. ಆದರೆ ಪೈಪ್‌ನಲ್ಲಿ ಕಾಲು ಭಾಗ ನೀರು ಸಹ ಬರುತ್ತಿಲ್ಲ. ನೀರು ಹರಿಸಿ ಎರಡ್ಮೂರು ದಿನಗಳು ಆಗಿದೆ ಇನ್ನೂ ಕೆರೆಯ ತಳಭಾಗದಲ್ಲೇ ಇದೆ ಎಂದರು.

ಮೊದಲ ಜಾಕ್ ವೆಲ್‌ನಲ್ಲಿ ಒಂದೇ ಮೋಟಾರು ಆನ್ ಮಾಡಿರುವುದರಿಂದ ಪೈಪ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಕೆರೆ ಭರ್ತಿಯಾಗಲು ಎಷ್ಟು ದಿನ ಬೇಕು, ಎರಡು ತಿಂಗಳಾದರೂ ಕೆರೆ ತುಂಬುವುದಿಲ್ಲ. ಇಲ್ಲಿಂದ ಮುಂದಿನ ಕೆರೆಗಳಿಗೆ ನೀರು ಯಾವಾಗ ಹರಿಯಬೇಕು. ಮೊದಲ ಜಾಕ್ ವೆಲ್‌ನ ಇನ್ನೊಂದು ಮೋಟಾರ್‌ ಆನ್ ಮಾಡಿದರೆ ಎರಡೂ ಮೋಟಾರುಗಳ ಒತ್ತಡದಿಂದ ಪೈಪ್ ತುಂಬ ನೀರು ಹರಿದರೆ ಕೆರೆ ತುಂಬಿಸಬಹುದು. ಇಲ್ಲಿಂದ ಮುಂದಿನ ಕೆರೆಗಳಿಗೆ ಸಹ ನೀರು ಹರಿಸಬಹುದು ಎಂದರು.

ಮಲ್ಲಶೆಟ್ಟಿಹಳ್ಳಿಯ ಎರಡನೇ ಜಾಕ್ ವೆಲ್‌ನಲ್ಲಿರುವ ಮೂರು ಮೋಟಾರುಗಳಲ್ಲಿ 2 ಕೆಟ್ಟುಹೋಗಿವೆ. ಒಂದು ಸುಸ್ಥಿತಿಯಲ್ಲಿದೆ. ಕೆಟ್ಟಿರುವ ಎರಡು ಮೋಟಾರುಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಇಲ್ಲಿನ ಕೆರೆ ತುಂಬಿದ ಬಳಿಕ ಮುಂದಿನ ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ನೆರವಾಗುವ ಕೆಲಸ ಮಾಡಬೇಕೆಂದು ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.

22 ಕೆರೆಗಳ ರಾಜನಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಪೈಪ್ ಲೈನ್ ಮಾರ್ಗದ ಅಲ್ಲಲ್ಲಿ ಸಣ್ಣಪುಣ್ಣ ಪೈಪ್‌ನಲ್ಲಿ ಸಮಸ್ಯೆಗಳು ಇವೆ. ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ಸಮರ್ಪಕವಾಗಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿರುವಂತೆ ಈ ಭಾಗದ 22 ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ಕೆರೆಗಳಿಗೆ ನೀರು ಹರಿಯುವಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಈ ಯೋಜನೆ ಆರಂಭದಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ಇದರ ಪರಿಣಾಮ ಆಗಾಗ ಪೈಪ್ ಲೈನ್ ಒಡೆದು ಮಳೆಗಾಲದಲ್ಲಿ 22 ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೊಸ ಪೈಪ್ ಲೈನ್ ಕಾಮಗಾರಿ ಮಾಡಿದರೆ ಕೆರೆಗಳಿಗೆ ಸಮಪರ್ಕ ನೀರು ತುಂಬಿಸಬಹುದು. ಈ ಬಗ್ಗೆ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ನಾವು ಚರ್ಚಿಸುತ್ತೇವೆ. ಬಳಿಕ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರ ಮೇಲೆ ಒತ್ತಡ ಹಾಕಿ, ರೈತರಿಗೆ ನೀರೊದಗಿಸುವ ಕೆಲಸ ಮಾಡುವುದಾಗಿ ಶಾಸಕ ಬಸವಂತಪ್ಪ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರಣ್ಣ, ಶಿವು ಪ್ರಕಾಶ್ ಪಾಟೀಲ್ ಹಾಜರಿದ್ದರು.

- - - -21ಕೆಡಿವಿಜಿ39, 40ಃ:

ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಜಾಕ್ ವೆಲ್ ಕಂ ಪಂಪ್ ಹೌಸ್ ನಂ.2 ಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು