ಕನ್ನಡಪ್ರಭ ವಾರ್ತೆ ಹಾಸನ
ಮಾನವ ಕಳ್ಳಸಾಗಾಣಿಕೆಯಾಗದಂತೆ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿವಹಿಸಿ, ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆಯಾಗದಂತೆ ಎಚ್ಚರವಹಿಸಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಹಾಗೂ ಜಾಗೃತಿ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಇಷ್ಟದಂತೆ ಬದುಕುವ ಹಕ್ಕು ಇದೆ, ಈ ಹಿನ್ನೆಲೆಯಲ್ಲಿ ಉತ್ತಮ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಪ್ರತಿಯೊಂದು ಮಗುವು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ೧೮ ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಗಳಿಗೆ ಬಳಕೆಮಾಡಿಕೊಳ್ಳುವಂತಿಲ್ಲ, ಹಲವು ಆಯಾಮಗಳನ್ನು ವಿಮರ್ಶೆ ಮಾಡಿದಾಗ ಭಿಕ್ಷಾಟನೆ, ಅನೈತಿಕ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದ ಅವರು ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತ ಗಮನಿಸಿ ಇಂತಹ ಚಟುವಟಿಕೆಗಳನ್ನು ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.ಜಿಲ್ಲಾಧಿಕಾರಿ ಲತಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ಗುರುತರವಾದ ಸಾಮಾಜಿಕ ಪಿಡುಗು. ಇದನ್ನು ಗಂಭೀರವಾಗಿ ಪರಿಗಣಿಸಿ, ತಡೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಮಕ್ಕಳ ಸಾಗಾಣಿಕೆ, ಮಹಿಳೆಯರು ಕಾಣೆಯಾಗುವ ಪ್ರಕರಣಗಳು ಕಂಡು ಬರುತ್ತಿದೆ, ಇದು ಆತಂಕ ಉಂಟುಮಾಡುತ್ತಿದೆ. ಗ್ರಾಮೀಣ ಮತ್ತು ತಾಲೂಕು ಮಟ್ಟದಲ್ಲಿ ತಂಡಗಳನ್ನು ರಚಿಸಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ, ಗೋಡೆ ಬರಹಗಳನ್ನು ಬರೆಸುವಂತೆ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಆರ್ಥಿಕ, ಸಾಮಾಜಿಕ, ದುರ್ಬಲ ವರ್ಗದವರು ಮಾನವ ಕಳ್ಳಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ, ಇದು ಶಿಕ್ಷಾರ್ಹ ಅಪರಾಧ ಇದನ್ನು ತಡೆಗಟ್ಟುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಹಿರಿಯ ವಕೀಲರಾದ ಬಿ. ಚಂದ್ರಶೇಖರ್ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮೊಗಣ್ಣಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್‌ಫೀರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಧರಣಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.