ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ನಾರ್ಕೋ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರೂ ಓಡಾಡದೇ ಇರುವಂತಹ ಪ್ರದೇಶದಲ್ಲಿ ಗಾಂಜಾ ಬೆಳೆಯುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಸ್ತು ಸಮಯದಲ್ಲಿ ಗಮನಹರಿಸಿ ಗಾಂಜಾ ಬೆಳೆಯನ್ನು ಪತ್ತೆಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಅದೇ ರೀತಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಎಚ್ಚರಿಕೆವಹಿಸಿ ತೋಟಗಾರಿಕೆ ಮತ್ತು ಕೃಷಿ ಜಮೀನುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಗಾಂಜಾ ಬೆಳೆ ಪತ್ತೆಹಚ್ಚಲು ನಿರ್ದೇಶನ ನೀಡಿದರು.
ಅಕ್ರಮವಾಗಿ ಔಷಧಿ ಅಂಗಡಿಗಳಲ್ಲಿ ಒಂದೇ ರೀತಿಯಾಗಿರುವ ಹೆಚ್ಚಿನ ಡ್ರಗ್ ಮಾರಾಟವಾಗುತ್ತಿದ್ದರೆ ಅಂತಹ ಅಂಗಡಿಗಳ ಮೇಲೆ ಸೂಕ್ತ ನಿಗಾವಹಿಸಿ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಹಾಯಕ ಔಷಧ ನಿಯಂತ್ರಣಾಧಿಕಾರಿಗೆ ಸೂಚಿಸಿದರು.ಹಾಸನ ಜಿಲ್ಲೆಯ ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ವಾರಾಂತ್ಯದ ಶುಕ್ರವಾರ ಮತ್ತು ಶನಿವಾರದಂದು ಹೊರಗಡೆಯಿಂದ ಯಾತ್ರಿಕರು ಬಂದು ಹೋಗುತ್ತಿದ್ದು, ಕೆಲವು ರೆಸಾರ್ಟ್ ಮತ್ತು ಹೋಂ ಸ್ಟೇಗಳು ಹೆಚ್ಚು ಭರ್ತಿಯಾಗುತ್ತಿವೆ. ಯಾತ್ರಿಕರಿಗೆ ಸೇವನೆ ಮಾಡಲು ಅಕ್ರಮವಾಗಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುವ ಮಾಹಿತಿ ಇರುವುದರಿಂದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಅನಿರೀಕ್ಷಿತ ಭೇಟಿ ನೀಡಿ ತಕ್ಷಣ ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿಯೂ ಕೂಡ ಸಂಬಂದಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಿದರು.
ಸಕಲೇಶಪುರಕ್ಕೆ ತೋಟದ ಕೆಲಸಕ್ಕೆ ಅಸ್ಸಾಂ, ಬಾಂಗ್ಲಾ ದೇಶದಿಂದ ಬಂದಿರುವ ಕಾರ್ಮಿಕರು ಸಂತೆ ನಡೆಯುವ ಸ್ಥಳಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಮ್ಮಯ್ಯ, ವೆಂಕಟೇಶ್ ನಾಯ್ಡು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.