ಡೆಂಘೀ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ವಹಿಸಿ

KannadaprabhaNewsNetwork | Published : Jul 13, 2024 1:31 AM

ಸಾರಾಂಶ

ಚಾಮರಾಜನಗರದ ಹೌಸಿಂಗ್ ಬೋರ್ಡ್‌ನ 26ನೇ ವಾರ್ಡಿನಲ್ಲಿರುವ ಅಂಬೇಡ್ಕರ್ ಉದ್ಯಾನವನದ ಬಳಿ ಹಮ್ಮಿಕೊಳ್ಳಲಾಗಿದ್ದ ‘ಲಾರ್ವಾ ಸಮೀಕ್ಷೆ ಆಂದೋಲನ’ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಡೀಸಿ ಶಿಲ್ಪಾನಾಗ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಡೆಂಘೀ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಲಾರ್ವಾ ಬೆಳವಣಿಗೆಯನ್ನು ತಡೆಯಲು ಸಾರ್ವಜನಿಕರು ಮನೆಯ ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು. ನಗರದ ಹೌಸಿಂಗ್ ಬೋರ್ಡ್‌ನ 26ನೇ ವಾರ್ಡಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಬಳಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಲಾರ್ವಾ ಸಮೀಕ್ಷೆ ಆಂದೋಲನ’ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡೆಂಘೀ ನಿಯಂತ್ರಣ ಸರ್ಕಾರದ ಇಲಾಖೆಗಳ ಕೆಲಸ ಮಾತ್ರವಲ್ಲ. ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ. ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುವ ಈಡೀಸ್ ಸೊಳ್ಳೆಯಿಂದ ಡೆಂಘೀ ರೋಗ ಉಲ್ಭಣವಾಗಲಿದೆ. ಜಿಲ್ಲೆಯಲ್ಲಿ ಜ್ವರ ಪ್ರಕರಣಗಳನ್ನು ಪರೀಕ್ಷಿಸಲಾಗಿ 65 ಪಾಸಿಟಿವ್ ಪ್ರಕರಣಗಳನ್ನು ಗುರುತಿಸಲಾಗಿತ್ತು. ಒಂದು ಪ್ರಕರಣ ಹೊರತುಪಡಿಸಿ ಉಳಿದ ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ ಎಂದರು.

ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಡೆಂಘೀಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ನಾಗರಿಕರು ಮನೆಯ ಸುತ್ತಮುತ್ತ 2-3 ದಿನಗಳ ಕಾಲ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಸಂಗ್ರಹವಾದರೂ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಪ್ರತಿ ಗ್ರಾಪಂ, ನಗರ ಪ್ರದೇಶಗಳಲ್ಲಿ ಡೆಂಘೀ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಬಯಲಿನಲ್ಲಿ ಅಥವಾ ಮನೆಯಲ್ಲಿ ನೀರು ಶೇಖರಣೆಯಾಗುವ ತೊಟ್ಟಿಗಳು, ಡ್ರಮ್, ಬ್ಯಾರೆಲ್, ಒಡೆದ ಬಾಟಲಿ, ಅನುಪಯುಕ್ತ ಟೈರ್‌ಗಳು, ಎಳೆನೀರಿನ ಚಿಪ್ಪುಗಳು, ಒಡೆದ ಬಾಟಲಿಗಳಲ್ಲಿ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಡೆಂಘೀ ನಿಯಂತ್ರಣದಲ್ಲಿ ಎಲ್ಲರೂ ಸಹಕರಿಸಬೇಕು. ಪ್ರತಿ ಶುಕ್ರವಾರ ಅರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಆಯಾ ಭಾಗದ ಎಲ್ಲಾ ಮನೆಮನೆಗಳಿಗೂ ಭೇಟಿ ನೀಡಿ ಲಾರ್ವ ಸಮೀಕ್ಷೆಯನ್ನು ಆಂದೋಲನದ ಮಾದರಿಯಲ್ಲಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ವಯೋವೃದ್ಧರು, ಮಕ್ಕಳನ್ನೇ ಗುರಿಯಾಗಿಸುವ ಡೆಂಘೀಯನ್ನು ಹಗುರವಾಗಿ ಪರಿಗಣಿಸಬಾರದು. ದಿನ ಬಳಕೆಗಾಗಿ ಶೇಖರಣೆ ಮಾಡುವ ನೀರನ್ನು ಪ್ರತಿ ಮೂರು ದಿನಕ್ಕೊಮ್ಮೆ ಬದಲಾಯಿಸಿ ಇಟ್ಟುಕೊಳಬೇಕು. ಸಣ್ಣ ಜ್ವರ ಬಂದರೂ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿ ಅವಶ್ಯ ಚಿಕಿತ್ಸೆ ಪಡೆಯಬೇಕು. ಆ ಮೂಲಕ ಡೆಂಘೀ ನಿರ್ಮೂಲನೆಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ತೀವ್ರತರದ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಕೈ ಹಾಗೂ ಕೀಲುಗಳಲ್ಲಿ ನೋವು, ವಿಪರೀತ ಬಾಯಾರಿಕೆ, ಇತ್ಯಾದಿ ಡೆಂಘೀ ಜ್ವರದ ಲಕ್ಷಣಗಲಾಗಿವೆ. ಡೆಂಘೀನಿಂದ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಸೊಳ್ಳೆ ನಿರೋಧಕಗಳು, ಪರದೆಗಳನ್ನು ಬಳಸಬೇಕು. ಮೈತುಂಬಾ ಬಟ್ಟೆ ಧರಿಸಬೇಕು. ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಕ ಜಾಲರಿಗಳನ್ನು ಅಳವಡಿಸಬೇಕು. ಹಗಲಿನಲ್ಲಿ ಮಲಗುವಾಗಲೂ ಸಹ ಸೊಳ್ಳೆ ಪರದೆಯಂತಹ ಸ್ವಯಂ ರಕ್ಷಣಾ ವಿಧಾನಗಳನ್ನು ಉಪಯೋಗಿಸಬೇಕು ಎಂದರು.

ಎಡಿಸಿ ಗೀತಾ ಹುಡೇದ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್‌ಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ರಾಮಚಂದ್ರ, ನಗರಸಭೆಯ ಪರಿಸರ ಎಂಜಿನಿಯರ್ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಹಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ದ್ವಾರಕೀಶ್, ಆರೋಗ್ಯ ಅಧಿಕಾರಿಗಳು ಇದ್ದರು.

ಇದೇ ವೇಳೆ ಹೌಸಿಂಗ್ ಬೋರ್ಡ್ ನಿವಾಸಿಯೊಬ್ಬರ ಮನೆಗೆ ತೆರಳಿ ನೀರು ಸಂಗ್ರಹಿಸಿದ್ದ ಟ್ಯಾಂಕ್‌ನ್ನು ಪರೀಕ್ಷಿಸಿ ಲಾರ್ವಾ ಬೆಳವಣಿಗೆಯನ್ನು ವೀಕ್ಷಿಸಲಾಯಿತು. ಅದೇ ನೀರಿಗೆ ಟೆಮಿನಾಸ್ ಲಿಕ್ವಿಡ್ ಸಿಂಪಡಿಸಿ ನೆರೆದಿದ್ದ ಸಾರ್ವಜನಿಕರಿಗೆ ಡೆಂಘೀ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಅಲ್ಲಿನ ನಿವಾಸಿಗಳು ನೀಡಿದ ಕುಡಿಯುವ ನೀರನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

Share this article