ಜಿಲ್ಲೆಯಲ್ಲಿ ಮಳೆ ಕಡಿಯಾಗಿದೆ ಎಂದು ಮೈಮರೆಯದೆ ಆಗಸ್ಟ್ ಅಂತ್ಯದವರೆಗೂ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ ಎಂದು ಮೈಮರೆಯದೆ ಆಗಸ್ಟ್ ಅಂತ್ಯದವರೆಗೂ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ಹಂತದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮೇ ಕೊನೆ ವಾರ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಜುಲೈನಲ್ಲಿ ಸಾಧಾರಣಾ ಮಳೆಯಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಯಾರೂ ಸಹ ಉದಾಸೀನತೆ ತೋರದೆ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ವಿಡಿಯೋ ಸಂವಾದ ಮೂಲಕ ಎಚ್ಚರಿಸಿದರು. ಮೇ ಕೊನೆ ವಾರದಿಂದಲೇ ಉತ್ತಮ ಮಳೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ಜಾಗೃತಿ ವಹಿಸುವುದು ಅಗತ್ಯ. ಆ ನಿಟ್ಟಿನಲ್ಲಿ ಈಗಾಗಲೇ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳು ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು. ಅಂಗನವಾಡಿ, ಶಾಲಾ ಕಟ್ಟಡಗಳು, ಕಾಲೇಜು ಕಟ್ಟಡಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮರ ಬಿದ್ದು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಗಮನಹರಿಸಬೇಕು. ಈ ಬಗ್ಗೆ ಮುನ್ನೆಚ್ಚರ ವಹಿಸಬೇಕು. ಆದ್ದರಿಂದ ಬೀಳುವ ಹಂತದ ಮರ ಇದ್ದಲ್ಲಿ ಅರಣ್ಯ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಬೀಳುವ ಹಂತದ ಮರಗಳು ಹಾಗೂ ಅಪಾಯದಂಚಿನಲ್ಲಿರುವ ಮರಗಳ ಸಂಬಂಧ ಹತ್ತಿರದ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮಳೆ ಕಡಿಮೆ ಇದೆ ಎಂದು ಭಾವಿಸಬಾರದು. ಭಾರತೀಯ ಹವಾಮಾನ ಇಲಾಖೆ ಕಾಲ ಕಾಲಕ್ಕೆ ಮಾಹಿತಿ ನೀಡಲಿದೆ ಎಂದರು. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಆಯಾಯ ಸ್ಥಳೀಯ ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಬಂಧ ತಹಸೀಲ್ದಾರರಿಗೆ ಮಾಹಿತಿ ನೀಡುವಂತಾಗಬೇಕು. ಜೊತೆಗೆ ತಹಸೀಲ್ದಾರರು ಸಹ ಸ್ಥಳ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಮಳೆ ಹಾನಿ ಸಂಬಧ ಜಿಲ್ಲಾಡಳಿತದ ಬಳಿ ಹಣ ಇದೆ. ಮುಂದಿನ ಆಗಸ್ಟ್ ಅಂತ್ಯದವರೆಗೂ ಸದಾ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಬಂಧ ಹೆಚ್ಚಿನ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಆನೆಚೌಕೂರು, ಮಾಲ್ದಾರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಅರಣ್ಯ ಚೆಕ್‌ಪೋಸ್ಟ್ ನ್ನು ತೆರೆಯುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.ಚೆಕ್‌ಪೋಸ್ಟ್ಗಳಲ್ಲಿ ಪೊಲೀಸ್ ಇಲಾಖೆಯವರು ಇದ್ದು, ಅರಣ್ಯ ಇಲಾಖೆಯವರು ಸಹ ಚೆಕ್‌ಪೋಸ್ಟ್ ಆರಂಭಿಸಿದರೆ, ಸಹಕಾರಿ ಆಗಲಿದೆ ಎಂದು ತಿಳಿಸಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಂಜಿನಿಯರ್‌ಗಳು ಹೆಚ್ಚುವರಿ ಕಂಬಗಳನ್ನು ಅಳವಡಿಸುವುದು, ವಿದ್ಯುತ್ ಪರಿವರ್ತಕಗಳನ್ನು ಅಗತ್ಯವಿರುವ ಕಡೆ ಅಳವಡಿಸಬೇಕು. ಈ ಬಗ್ಗೆ ಗಮನಹರಿಸಬೇಕು. ಜಾನುವಾರು ರಕ್ಷಣೆ ಸಂಬಂಧಿಸಿದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ವಿಡಿಯೋ ಸಂವಾದದಲ್ಲಿ ತಹಸೀಲ್ದಾರರು, ತಾ.ಪಂ.ಇಒಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಸೆಸ್ಕ್ ಎಂಜಿನಿಯರ್ ರಾಮಚಂದ್ರ, ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.