ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ತಡೆಯಲು ಅಗತ್ಯ ಕ್ರಮ ವಹಿಸಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Aug 27, 2024, 01:36 AM IST
19 | Kannada Prabha

ಸಾರಾಂಶ

ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಚ್‌ಒ ಮತ್ತು ನಾವು ಸಭೆ ನಡೆಸಿದ್ದೇವೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ನಡೆದ ನಂತರ ಮಂಡ್ಯಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದೇವೆ. ಪ್ರಕರಣದ ಪ್ರಮುಖ ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್‍ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಭ್ರೂಣ ಪತ್ತೆ, ಹತ್ಯೆಗೆ ಕಡಿವಾಣ ಹಾಕಲು ಯಾವ ಕ್ರಮ ಕೈಗೊಂಡಿದ್ದೀರಾ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದೇವೆ. ಕಾಲ ಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ಮಾಡುತ್ತಿದ್ದೇವೆ. ಭ್ರೂಣ ಪತ್ತೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು.

ಇಂತಹ ಪ್ರಕರಣಗಳು ತೋಟದ ಮನೆ, ಒಂಟಿ ಮನೆಗಳಲ್ಲಿ ನಡೆಯುತ್ತಿವೆ. ಡೆಕಾ ಆಪರೇಷನ್ ಮೂಲಕ ಮೊನ್ನೆ ಒಂದು ಪ್ರಕರಣ ಕಂಡು ಹಿಡಿಯಲಾಗಿದೆ. ಸಾರ್ವಜನಿಕರು ಸಹ ಜಿಲ್ಲಾಡಳಿತಕ್ಕೆ ಸಹಕರಿಸಿದರೆ ಈ ಅಕ್ರಮ ದಂಧೆಗೆ ಕಡಿವಾಣ ಹಾಕಬಹುದು ಎಂದು ಸಂಸದರಿಗೆ ಮಾಹಿತಿ ನೀಡಿದರು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಚ್‌ಒ ಮತ್ತು ನಾವು ಸಭೆ ನಡೆಸಿದ್ದೇವೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ನಡೆದ ನಂತರ ಮಂಡ್ಯಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದೇವೆ. ಪ್ರಕರಣದ ಪ್ರಮುಖ ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದರು. ಶಾಸಕ ರವಿಕುಮಾರ್ ಮಾತನಾಡಿ, ಅಭಿಷೇಕ್ ಎಂಬಾತ ಕಿಂಗ್‌ಪಿನ್ ಆಗಿದ್ದು ಆತನನ್ನು ಪತ್ತೆ ಹಚ್ಚಿಲ್ಲ. ಸ್ಕ್ಯಾನಿಂಗ್ ಸೆಂಟರ್ ಇಟ್ಟುಕೊಂಡು ಈ ಕೃತ್ಯ ಮಾಡುತ್ತಿದ್ದಾರೆ. ಆದರೂ ಆತನನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಲಿಂಗಾನುಪಾತದ ಬಗ್ಗೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿ, 1000 ಗಂಡು ಮಕ್ಕಳಿಗೆ 865 ಹೆಣ್ಣು ಮಕ್ಕಳ ಸಂಖ್ಯೆ ಇದೆ. ಇದೇ ರೀತಿ ಲಿಂಗಾನುಪಾತದ ವ್ಯತ್ಯಾಸವಾದರೆ ಭವಿಷ್ಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಿಮ್ಸ್ ಆಸ್ಪತ್ರೆಗೆ ಸಿಎಸ್‌ಆರ್ ನಿಯಡಿ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಅಗತ್ಯತೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರಿಗೆ ಸೂಚಿಸಿದರು.

ತಾಯಿ, ಶಿಶುಗಳ ಮರಣ ಪ್ರಮಾಣ ಹೆಚ್ಚಳ:

ತಾಯಿ-ಶಿಶುಗಳ ಮರಣ ಪ್ರಮಾಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಡಿಎಚ್‌ಒಗೆ ಸಚಿವರು ಸೂಚಿಸಿದರು.

ಇದಕ್ಕೆ ಉತ್ತರಿಸಿದ ಡಾ.ಕೆ.ಮೋಹನ್, ಹೊರ ಜಿಲ್ಲೆಯವರು ನಮ್ಮಲ್ಲಿರುವ ಆಸ್ಪತ್ರೆಗಳಿಗೆ ಹೆರಿಗಾಗಿ ಬರುತ್ತಾರೆ. ಹೆರಿಗೆಗೂ ಮುನ್ನ ಅವರು ಸರಿಯಾದ ಚಿಕಿತ್ಸೆ ಅಥವಾ ಸಲಹೆ ಪಡೆದಿರುವುದಿಲ್ಲ. ಹೀಗಾಗಿ ಇಲ್ಲಿಗೆ ಬಂದು ಹೆರಿಗೆ ಮಾಡಿಸುವವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ ಎಂದು ವಿವರಿಸಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!