ಕನ್ನಡಪ್ರಭ ವಾರ್ತೆ ಇಂಡಿ
ಭೀಮಾನದಿಗೆ ಮಹಾರಾಷ್ಟ್ರದ ಉಜನಿ, ಸೀನಾ ನದಿ ಹಾಗೂ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಭೀಮಾನದಿಗೆ ಸೇರುತ್ತಿದ್ದು, ಇದರಿಂದ ಪ್ರವಾಹ ಸಂಭವವಿದೆ. ತಾಲೂಕಿನ ಭೀಮಾನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹದಿಂದ ತೊಂದರೆಯಾಗದಂತೆ ತಾಲೂಕು ಆಡಳಿತ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಪಂ ಸಭಾ ಭವನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಬಗ್ಗೆ ಕರೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಭೀಮಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭೀಮಾನದಿಗೆ ಕಟ್ಟಲಾಗಿರುವ ಸೊನ್ನ ಬ್ಯಾರೇಜ್‌ದ ಎಲ್ಲಾ ಗೇಟ್‌ಗಳನ್ನು ತಗೆಯಬೇಕು. ಕಳೆದ ಬಾರಿ ಭೀಮಾನದಿಗೆ ನೀರು ಬಂದಿದ್ದರಿಂದ ಸೊನ್ನ ಬ್ಯಾರೇಜ್ ಗೇಟ್ ತೆರೆಯರೆ ಇರುವುದರಿಂದ ಅವಾಂತರ ಸೃಷ್ಠಿಯಾಗಿ ಪ್ರವಾಹ ಉಂಟಾಗಿತ್ತು. ಈ ಬಾರಿ ಹಾಗಾಗದಂತೆ ನಿಗಾ ವಹಿಸಬೇಕು. ಸೊನ್ನ ಬ್ಯಾರೇಜ್‌ನ ಎಲ್ಲಾ ಗೇಟ್‌ಗಳು ತೆರೆಯಬೇಕು. ಪ್ರವಾಹ ಕಡಿಮೆ ಆಗುತ್ತಿದ್ದಂತೆ ಮತ್ತೇ ಗೇಟ್ ಹಾಕಲಿ ಎಂದು ಹೇಳಿದರು.ನಿತ್ಯ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ರಸ್ತೆಗಳು ಹಾಳಾಗಿವೆ. ಮನೆಗಳು ಹಾನಿಯಾಗಿವೆ. ಹಳೆ ಮನೆಯಲ್ಲಿ ಇರುವವರು ಸ್ವಲ್ಪ ದಿನ ಕಾಳಜಿ ಕೇಂದ್ರದಲ್ಲಿ ಇರುವಂತೆ ವ್ಯವಸ್ಥೆ ಮಾಡಬೇಕು. ಸಂಭವನೀಯ ಹಾನಿ ತಪ್ಪಿಸಲು ಮುಂಜಾಗ್ರತ ಕ್ರಮ ಕೈಗೊಳ್ಳುವುದು ಉತ್ತಮ. ಮಳೆ,ಪ್ರವಾಹದಿಂದ ಹಾನಿಯಾದ ಬೆಳೆ ಸರ್ವೆ ಮಾಡಿ ವರದಿ ನೀಡಿ, ಮಳೆಯಿಲ್ಲದೆ ಬರಗಾಲ ಉಂಟಾಗಿ ಪ್ರತಿ ವರ್ಷ ರೈತರು ಸಂಕಷ್ಟ ಅನುಭವಿಸುತ್ತಿದ್ದರೆ, ಈ ವರ್ಷ ಮಳೆ ಹೆಚ್ಚಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ರೈತರ ಸಂಕಷ್ಟದ ಸಮಯಕ್ಕೆ ಸಹಾಯಕ್ಕೆ ಬರಬೇಕಾಗಿರುವುದು ನಮ್ಮ ಕರ್ತವ್ಯ. ಹೀಗಾಗಿ ಸಂಪೂರ್ಣ ಬೆಳೆ ಸಮಿಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿ ನೀಡಿ, ಜಿಲ್ಲೆಯಲ್ಲೇ ಚಡಚಣ, ಇಂಡಿ ತಾಲೂಕಿನಲ್ಲಿ ಮಳೆ ಹೆಚ್ಚಾಗಿದೆ. ಗುರಿಗಿಂತ ಮೂರುಪಟ್ಟು ಮಳೆಯಾಗಿದೆ. ಮಳೆಯಿಂದಾಗಿ ಸರ್ವೆ ಮಾಡಲು ತೊಂದರೆಯಾಗುತ್ತಿದೆ. ಮಳೆ ನಿಂತ ಮೇಲೆ ನಿರ್ಧಿಷ್ಟ ಬೆಳೆಹಾನಿ ವರದಿ ನೀಡುವುದಾಗಿ ತಿಳಿಸಿದರು.
ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ಭೀಮಾನದಿಗೆ ಉಜನಿ, ಸೀನಾ ಜಲಾಶಯದಿಂದ ಹಾಗೂ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳ, ಬಾಂದಾರಗಳಿಂದ ಸೇರಿ ಒಟ್ಟು 2.80 ಲಕ್ಷ ಕ್ಯೂಸೆಕ್ಸ ನೀರು ಬಿಟ್ಟಿದ್ದು, ಬುಧವಾರ ಸಂಜೆ, ಇಲ್ಲವೆ ಗುರುವಾರ ಇಂಡಿ ತಾಲೂಕು ತಲುಪುವ ಸಾದ್ಯತೆ ಇದೆ.ಇದರಿಂದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ತಹಶೀಲ್ದಾರ ಬಿ.ಎಸ್.ಕಡಕಭಾವಿ ಮಾತನಾಡಿ, ಪ್ರವಾಹ ಪರಿಸ್ಥಿತಿ ಬಗ್ಗೆ ನಿಗಾ ಇಡಲು, ತುರ್ತು ಕ್ರಮ ವಹಿಸಲು 12 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪಿಡಿಒ, ಗ್ರಾಮ ಆಡಳಿತಾಧಿಕಾರಿ, ಗ್ರಾಮ ಸಹಾಯಕ, ಆಶಾ ಕಾರ್ಯಕರ್ತರು ಸೇರಿ ತಂಡದವರು ಕಾಳಜಿ ಕೇಂದ್ರ ಸೇರಿದಂತೆ ಪ್ರವಾಹ ಕುರಿತು ವರದಿ ನೀಡಲಿದ್ದಾರೆ. ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಎಸಿ ಅನುರಾಧಾ ವಸ್ತ್ರದ, ಡಿವೈಎಸ್ಪಿ ಜಗದೀಶ, ತಾಪಂ ಇಒ ಡಾ.ಕನ್ನೂರ, ಕಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಹೆಸ್ಕಾಂ ಎಇಇ ಎಸ್.ಆರ್,ಮೆಂಡೆಗಾರ, ಶಿವಾಜಿ ಬನಸೋಡೆ, ಬಿಇಒ ಮುಜಾವರ ಸೇರಿದಂತೆ ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಸಭೆಯಲ್ಲಿ ಇದ್ದರು.
ಬಾಕ್ಸಭೀಮಾನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮಾಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು, ಪ್ರವಾಹ ಅವಲೋಕಿಸುತ್ತಿರಬೇಕು. ಮೋಬೈಲ್ ಬಂದ್ ಇಟ್ಟುಕೊಂಡು ಇರಬಾರದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದರು.
ಪ್ರವಾಹ ವಿಷಯದಲ್ಲಿ ಜಾಗ್ರತ ವಹಿಸಬೇಕು. ನಿರ್ಲಕ್ಷ ವಹಿಸಿದ ಅಧಿಕಾರಿಯ ಮೇಲೆ ನಿರ್ದಾಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.ಕಾಳಜಿ ಕೇಂದ್ರಗಳಿಗೆ ವಿದ್ಯುತ್, ಕುಡಿಯುವ ನೀರು, ಆಹಾರಧಾನ್ಯ, ಗ್ಯಾಸ್ ಸೇರಿದಂತೆ ಎಲ್ಲವೂ ಮುಂಜಾಗ್ರತವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು. ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮದ ಮೂವರು ಜನರ ಮೊಬೈಲ್ ಸಂಖ್ಯೆ ಇಟ್ಟುಕೊಳ್ಳಬೇಕು.ಪ್ರತಿ ಗಂಟೆಗೊಮ್ಮೆ ಪ್ರವಾಹ ಕುರಿತು ಮಾಹಿತಿ ಕಲೆಹಾಕಿ ತಾಲೂಕ,ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.ಮಳೆಯಿಂದ ಹಳೆ ಮನೆಗಳು ಬಿಳುವ ಸಂಭವ ಇದ್ದು, ಹಳೆ ಮನೆಯಲ್ಲಿ ವಾಸಿಸುವ ಕುಟುಂಬಗಳಿಗೆ ತಿಳುವಳಿಕೆ ಹೇಳಿ,ಅವರನ್ನು ಕಾಳಜಿ ಕೇಂದ್ರದಲ್ಲಿ ಇರುವಂತೆ ಮಾಡಬೇಕು. ಜೀವಹಾನಿಯಾದ ಮೇಲೆ ಪರಿಹಾರ ಕೊಡುವುದು ಮುಖ್ಯವಲ್ಲ. ಜೀವಹಾನಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಮುಖ್ಯ ಎಂದು ಹೇಳಿದರು.ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು, ಮಳೆ,ಪ್ರವಾಹ ಯುದ್ದೋಪಾಧಿಯಲ್ಲಿ ಎದುರಿಸಬೇಕು.ಇದರಲ್ಲಿ ನಿರ್ಲಕ್ಷ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು.
ಕೋಟ್40 ವರ್ಷಗಳಿಂದ ಸೀನಾ ನದಿಯಿಂದ ವಿಜಯಪುರ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರಲಿಲ್ಲ. ಇಂದು ರಾಷ್ಟ್ರೀಯ ಹೆದ್ದಾರಿಯೇ ಬಂದ್ ಆಗಿದೆ. ಈಗಾಗಲೇ ಉಜನಿ, ಸೀನಾ ಜಲಾಶಯದಿಂದ ಹಾಗೂ ಹಳ್ಳ-ಕೊಳ್ಳದಿಂದ ಭೀಮಾನದಿಗೆ ಸೇರಿ ಒಟ್ಟು 2.80 ಲಕ್ಷ ಕ್ಯೂಸೆಕ್ಸ ನೀರು ಹರಿಯುತ್ತಿದೆ. ನದಿ ದಂಡೆಯ ಗ್ರಾಮಗಳ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಕಾಳಜಿ ಕೇಂದ್ರಗಳನ್ನು ತೆರೆಯಿರಿ.ಯಶವಂತರಾಯಗೌಡ ಪಾಟೀಲ, ಶಾಸಕ