ಶಿರೂರು ಗುಡ್ಡ ಕುಸಿತ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ

KannadaprabhaNewsNetwork |  
Published : Feb 06, 2025, 12:18 AM IST
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಿತು  | Kannada Prabha

ಸಾರಾಂಶ

ಬ್ಲಾಕ್‌ಸ್ಪಾಟ್ ಸ್ಥಳಗಳಲ್ಲಿ ಅಪಘಾತ ಮುನ್ನೆಚ್ಚರಿಕೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು.

ಕಾರವಾರ: ಶಿರೂರಿನಲ್ಲಿ ಪ್ರಸಕ್ತ ಮಳೆಗಾಲದ ಸಂದರ್ಭದಲ್ಲಿ ಪುನಃ ಗುಡ್ಡ ಕುಸಿದು ಯಾವುದೇ ಅನಾಹುತವಾಗದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ರಸ್ತೆ ಸುರಕ್ಷಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿರೂರಿನಲ್ಲಿ ಈ ಮಳೆಗಾಲದ ಸಂದರ್ಭದಲ್ಲಿ ಪುನಃ ಗುಡ್ಡ ಕುಸಿದು ಯಾವುದೇ ಅನಾಹುತವಾಗದಂತೆ ಕುರಿತಂತೆ ಜಿಎಸ್‌ಐ ಅಧಿಕಾರಿಗಳು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ನಿಗದಿಪಡಿಸಿದ ಅವಧಿಯೊಳಗೆ ಹೆದ್ದಾರಿಯ ಎಲ್ಲ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಕುರಿತಂತೆ ತಮ್ಮ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಬಾಕಿ ಇರುವ ಅಗತ್ಯ ಅನುಮತಿ ಪಡೆದು, ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮತ್ತು ಇತರ ಹೆದ್ದಾರಿಗಳಲ್ಲಿ ಗುರುತಿಸಲಾಗಿರುವ ಬ್ಲಾಕ್‌ಸ್ಪಾಟ್‌ಗಳ ಬಳಿ ತುರ್ತು ಸಂದರ್ಭದಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಲು ಅನುಕೂಲವಾಗುವಂತೆ ಮೊಬೈಲ್ ಟವರ್‌ಗಳನ್ನು ತಪ್ಪದೇ ಅಳವಡಿಸುವಂತೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಯಲ್ಲಾಪುರ ಬಳಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಳುಗಳು ತಕ್ಷಣಕ್ಕೆ ಪೊಲೀಸ್‌ಗೆ ಸಂಪರ್ಕಿಸಲು ಅಥವಾ ಇತರ ಯಾರನ್ನೂ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಸಿಗ್ನಲ್ ದೊರಕದೆ ಇದ್ದುದು ಕಂಡು ಬಂದಿದೆ. ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಗುರುತಿಸಿರುವ ಅಪಘಾತ ವಲಯದಲ್ಲಿ ಬಿಎಸ್‌ಎನ್‌ಎಲ್‌ ವತಿಯಿಂದ ಮೊಬೈಲ್ ಟವರ್ ಅಳವಡಿಸುವ ಕಾರ್ಯವನ್ನು ಆದ್ಯತೆಯಲ್ಲಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬ್ಲಾಕ್‌ಸ್ಪಾಟ್ ಸ್ಥಳಗಳಲ್ಲಿ ಅಪಘಾತ ಮುನ್ನೆಚ್ಚರಿಕೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಪ್ರದೇಶದಲ್ಲಿ ರಾತ್ರಿಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು ಮತ್ತು ತುರ್ತು ಸಹಾಯವಾಣಿ ಸಂಖ್ಯೆಗಳ ವಿವರಗಳನ್ನು ನಮೂದಿಸಿದ ಫಲಕಗಳನ್ನು ಅಳವಡಿಸುವಂತೆ ಹಾಗೂ ಆ ಪ್ರದೇಶಗಳನ್ನು ಅಪಘಾತ ರಹಿತವನ್ನಾಗಿ ಮಾಡಲು ಪೊಲೀಸ್ ಇಲಾಖೆ ಸೂಚಿಸುವ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್, ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆ ಸೂಚಿಸುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಗೆ ಒಳ ಬರುವ ಮತ್ತು ಜಿಲ್ಲೆಯಿಂದ ಹೊರ ಹೋಗುವ ಎಲ್ಲ ಗಡಿ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ಮತ್ತು ಅಗತ್ಯ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''