ಡೆಂಘೀ ಜ್ವರದ ಕುರಿತು ಮುನ್ನೆಚ್ಚರಿಕೆ ವಹಿಸಿ

KannadaprabhaNewsNetwork | Published : Jul 8, 2024 12:31 AM

ಸಾರಾಂಶ

ಬೀದರ್‌ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ಶನಿವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಸಿಇಒ ಡಾ. ಬಡೋಲೆ ಅವರು ಭೇಟಿ ನೀಡಿ ಡೆಂಘೀ, ಚಿಕೂನಗುನ್ಯಾ ಪ್ರಕರಣಗಳ ಕುರಿತು ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಬೀದರ್‌ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮತ್ತು ಜಿಪಂ ಸಿಇಒ ಡಾ.ಗಿರೀಶ ಬಡೋಲೆ ಜಂಟಿಯಾಗಿ ಆವರಣದಲ್ಲಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳ ಕುರಿತು ಮಾಹಿತಿ ಪಡೆದರು.

ಬೀದರ್‌ ಜಿಲ್ಲೆಯ 57 ಜನ, ತೆಲಂಗಾಣಾದ ಇಬ್ಬರಿಗೆ ಡೆಂಘೀ ಜ್ವರ :

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರೆಪ್ಪ ಅವರು, ಜಿಲ್ಲೆಯಲ್ಲಿ ಈವರೆಗೆ 59 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಈ ಕುರಿತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಶೇಖರ್‌ ಪಾಟೀಲ್‌ ಪತ್ತೆಯಾದ ಎಲ್ಲಾ ಡೆಂಘೀ ಪ್ರಕರಣಗಳ ಮನೆಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಎಲ್ಲಾ ಪತ್ತೆಯಾದ 59 ಡೆಂಘೀ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಪತ್ತೆಯಾದ 59 ಡೆಂಘೀ ಪ್ರಕರಣಗಳಲ್ಲಿ 2 ಪ್ರಕರಣ ತೆಲಂಗಾಣ ರಾಜ್ಯದಾಗಿದ್ದು, ಉಳಿದ 57 ಪ್ರಕರಣಗಳು ಜಿಲ್ಲೆಯದ್ದಾಗಿವೆ. ಇಲ್ಲಿಯವರೆಗೆ ಡೆಂಘೀ ಜ್ವರದಿಂದ ಮರಣ ಹೊಂದಿದ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನಿರಗುಡೆ ಮಾಹಿತಿ ನೀಡಿ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಚಿಕಿತ್ಸಾ ಕೇಂದ್ರಗಳು ಸ್ಥಾಪಿಸಲಾಗಿದ್ದು, ವೈದ್ಯರ ಉಪಸ್ಥಿತಿಯಲ್ಲಿ ಶಂಕಿತ ಪ್ರಕರಣಗಳ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳ ನಿಗಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಡೆಂಘೀ ಪ್ರಕರಣಗಳ ನಿಯಂತ್ರಣಕ್ಕಾಗಿ ನಗರ ಪ್ರದೇಶಗಳಲ್ಲಿ ಈಡೀಸ್‌ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಎಲ್ಲಾ ತಾಲೂಕುಗಳಿಗೆ ಜಿಲ್ಲಾ ಮಟ್ಟದಿಂದ ಮೇಲ್ವಿಚಾರಣಾಧಿಕಾರಿಗಳು ಹಾಗೂ ತಾಲೂಕು ನೋಡಲ್‌ ಅಧಿಕಾರಿಗಳನ್ನಾಗಿ ಡಾ. ಕಿರಣ ಪಾಟೀಲ್‌, ಡಾ. ಶಿವಶಂಕರ ಬಿ, ಡಾ. ಅನೀಲ್‌ ಚಿಂತಾಮಣಿ, ಡಾ.ದಿಲೀಪ ಡೋಂಗ್ರೆ ಆವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳ ಕ್ಷೇತ್ರ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಜ್ವರ ಪ್ರಕರಣಗಳು ಪತ್ತೆಯಾದಲ್ಲಿ ಅವರ ರಕ್ತದ ಮಾದರಿ ಪಡೆದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ಪರೀಕ್ಷೆಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಗಳಿಗೆ ಸಹಕರಿಸಿ ಲಾರ್ವಾ ನಿರ್ಮೂಲನೆಗಾಗಿ ಒಣ ದಿನ ಆಚರಿಸಲು ಕೋರಲಾಗಿದೆ ಎಂದು ತಿಳಿಸಿದರು.

ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತ ಸೇರಿದಂತೆ ಇನ್ನಿತರ ಲಕ್ಷಣಗಳು ಕಾಣಿಸಿಕೊಂಡಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this article