ಜಿಲ್ಲೆಯಲ್ಲಿ ಕೆಎಫ್‌ಡಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಡಿಸಿ ಡಾ. ಕೆ.ವಿದ್ಯಾಕುಮಾರಿ

KannadaprabhaNewsNetwork |  
Published : Nov 23, 2024, 12:35 AM IST
22ಕೆಎಫ್‌ಡಿ | Kannada Prabha

ಸಾರಾಂಶ

ಉಡುಪಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಫ್‌ಡಿ ಹಾಗೂ ಇತರ ಪ್ರಾಣಿ ಜನ್ಯ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಯಿತು.

ಪ್ರಾಣಿ ಜನ್ಯ ರೋಗ ಮುಂಜಾಗ್ರತೆ ಬಗ್ಗೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಮಣಿಪಾಲ

ಕ್ಯಾಸನೂರು ಅರಣ್ಯ ರೋಗ (ಕೆಎಫ್‌ಡಿ) ಅಥವಾ ಮಂಗನ ಕಾಯಿಲೆಯು ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್‌ ವರೆಗೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆ, ಇವುಗಳ ನಿಯಂತ್ರಣಕ್ಕೆ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಫ್‌ಡಿ ಹಾಗೂ ಇತರ ಪ್ರಾಣಿ ಜನ್ಯ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ಮಲೆನಾಡು ಭಾಗದಲ್ಲಿ ಕ್ಯಾಸನೂರು ಅರಣ್ಯ ರೋಗವು ಹಲವು ವರ್ಷಗಳಿಂದ ಕಂಡು ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಕಾಡಂಚಿನ ಪ್ರದೇಶಗಳಲ್ಲಿ ಈ ಹಿಂದೆ ಆಗಿರುವುದು ಕಂಡು ಬಂದಿದೆ. ಆದರೆ ಪ್ರಸ್ತುತ ಯಾವುದೇ ಪ್ರಕರಣಗಳು ಇರುವುದಿಲ್ಲ ಎಂದರು.ಉಷ್ಣಾಂಶ ಹೆಚ್ಚಿರುವ ನವೆಂಬರ್‌ನಿಂದ ಜೂನ್‌ ವರೆಗೆ ಈ ಕಾಯಿಲೆ ಬರುತ್ತದೆ. ಸಾಮಾನ್ಯವಾಗಿ ಜನರು ಉರುವಲುಗಳನ್ನು ತರಲು ಕಾಡಿಗೆ ಹೋಗಿ ಬಂದಾಗ ಅಥವಾ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋದಾಗ ಉಣ್ಣೆಗಳು ಅವುಗಳ ಜೊತೆಯಲ್ಲಿ ಬಂದು ಮನುಷ್ಯನಿಗೆ ಕಚ್ಚಿದಾಗ ಈ ಕಾಯಿಲೆ ಬರುತ್ತದೆ ಎಂದು ತಿಳಿಸಿದರು.

ಮಂಗನ ಜ್ವರ ಬಂದರೆ 3ರಿಂದ 5 ದಿನಗಳ ಕಾಲ ತೀವ್ರ ಜ್ವರ, ತೀವ್ರ ದೇಹನೋವು, ಕಣ್ಣು ಕೆಂಪಾಗುವುದು, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬರುತ್ತವೆ ಎಂದರು.ಮಂಗ ಸತ್ತ ಜಾಗವನ್ನು ಹಾಟ್ ಸ್ಪಾಟ್ ಎಂದು ಗುರುತಿಸಿ, 2 ಕಿ.ಮೀ. ವ್ಯಾಪ್ತಿಯಲ್ಲಿ ಜ್ವರ ಇರುವ ಕುರಿತು ಸರ್ವೇ ನಡೆಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿನಲ್ಲಿ ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ತಮ್ಮ ಆರೋಗ್ಯದ ಬಗ್ಗೆಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಅರಿವು ಮೂಡಿಸಲು ಹೆದ್ದಾರಿ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

* ನಾಯಿ ಕಡಿತ ಹೆಚ್ಚುತ್ತಿದೆ

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚು ಆಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ನಾಯಿ ಕಚ್ಚಿದವರಿಗೆ ಹಾಗೂ ಹಾವು ಕಚ್ಚಿದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಲಸಿಕೆಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ್, ಜಿಲ್ಲಾ ಸರ್ಜನ್ ಡಾ. ಎಚ್.ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಶಾಂತ್ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌