ಮೊಳಕಾಲ್ಮುರು: ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಅಧಿಕಾರಿಗಳು ಬರ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಇಂದಿನಿಂದಲೇ ಚುರುಕಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ರಾಂಪುರ ಹಾಗೂ ಮುತ್ತಿಗಾರಹಳ್ಳಿ ಗೋಶಾಲೆಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರವೇ ಕೊಂಡ್ಲಹಳ್ಳಿ ಸಮೀಪದ ಈರಣ್ಣಗುಡ್ಡದ ಗೋಶಾಲೆ ಆರಂಭಿಸಲಾಗುವುದು. ಈ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡದಂತೆ ಎಚ್ಚರವಹಿಸಬೇಕು. ವಾರದಲ್ಲಿ ಮೂರು ದಿನ ಹಸಿ ಹುಲ್ಲು, ಉಳಿದ ಮೂರು ದಿನ ಒಣ ಹುಲ್ಲು ವಿತರಣೆಗೆ ಕ್ರಮಕೈಗೊಳ್ಳಬೇಕು. ದನಕರುಗಳ ಸಂಖ್ಯೆಗನುಗುಣವಾಗಿ ಮೇವಿನ ದಾಸ್ತಾನು ಮಾಡಿಕೊಳ್ಳಬೇಕು. ಗೋಶಾಲೆಗಳ ಬಳಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಬೇಕು ಎಂದರು.
ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಹಾಗೂ ಮಾಲೀಕರಿಗೆ ನೆರಳಿನ ವ್ಯವಸ್ಥೆಗೆ ಶೆಡ್‌ಗಳ ನಿರ್ಮಾಣ ಮಾಡಬೇಕು. ವಿದ್ಯುತ್ ಸರಬರಾಜು, ಮೂಲಭೂತ ಸೌಕರ್ಯಗಳು ಕೊರತೆಯಾಗದಂತೆ ಮುಂಜಾಗ್ರತಾ ವ್ಯವಸ್ಥೆಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಮೇವು, ನೀರಿಲ್ಲದೆ ಜಾನುವಾರುಗಳು ಮೃತಪಟ್ಟರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಯಾಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ನೀರು ಸರಬರಾಜು ಇಲಾಖೆ ಎಇಇ ಹರೀಶ್ ಬಳಿ ತಾಲೂಕಿನ ಕುಡಿವ ನೀರಿನ ಸ್ಥಿತಿಗತಿ ಹಾಗೂ ಸಮಸ್ಯೆಗಳ ಮಾಹಿತಿ ಪಡೆದು ಮಾತನಾಡಿದ ಶಾಸಕರು, ತಹಸೀಲ್ದಾರ್, ತಾಪಂ ಇಒ ಹಾಗೂ ನೀವು ಜತೆಗೂಡಿ ಸಬ್ ಟಾಸ್ಕ್‌ಫೋರ್ಸ್ ಸಮಿತಿಯಂತೆ ಕೆಲಸ ಮಾಡಬೇಕು. ಮಾನವೀಯತೆಯಿಂದ ಬರಗಾಲವನ್ನು ಎದುರಿಸುವ ಗುಣ ಬೆಳೆಸಿಕೊಳ್ಳಿ ಎಂದರು.
ಅಭಿವೃದ್ಧಿ ಕಾರ್ಯಗಳಿಗೆ ವಿರೋಧಗಳು ಸಹಜ, ನೂರು ಜನರಿಗೆ ಅನುಕೂಲವಾಗುವಂಥಹ ಕೆಲಸಗಳಿದ್ದಲ್ಲಿ ಈ ಕೆಲಸಕ್ಕೆ ಆದ್ಯತೆ ನೀಡಬೇಕು. ಬರಗಾಲವಾದ್ದರಿಂದ ಇಲಾಖಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಬೇರೆ ಕಡೆಯಿಂದ ಓಡಾಡುವುದು ಬಿಟ್ಟು ಸ್ಥಳದಲ್ಲಿಯೇ ಇದ್ದು ಸಮಸ್ಯೆಗಳನ್ನು ಅವಲೋಕಿಸಬೇಕು. ಎಲ್ಲಿಯೂ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಿದರು.ಪಪಂ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆಯ ಬಗ್ಗೆ ಮುಖ್ಯಾಧಿಕಾರಿ ಮಂಜುನಾಥ್ ಅವರನ್ನು ತರಾಟೆ ತೆಗೆದುಕೊಂಡ ಶಾಸಕ, ಇಂದಿನಿಂದ ನೀವು ರಜೆ ಹಾಕಿ ಮನೆಯಲ್ಲಿರಿ, ನಾನು ಬೇರೆಯವರನ್ನು ನಿಯೋಜಿಸಿಕೊಂಡು ಕೆಲಸ ಮಾಡಿಸುತ್ತೇನೆ. ನಿಮ್ಮಿಂದ ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಹಾಗೂ ವಸ್ತುಸ್ಥಿತಿಯ ಮಾಹಿತಿಯನ್ನೂ ನನಗೆ ಹೇಳದೆ ಮನಬಂದಂತೆ ಕೆಲಸ ಮಾಡುತ್ತಿರುವುದು ಸರಿ ಕಾಣದು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೂ ಮುನ್ನಾ ಪಟ್ಟದಲ್ಲಿ ಸಬ್ ರಿಜಿಸ್ಟರ್ ಕಚೇರಿ, ತಹಸೀಲ್ದಾರ್ ವಸತಿ ಗೃಹ, ಪಟ್ಟಣ ಪಂಚಾಯಿತಿ ಮಟನ್ ಹಾಗೂ ಚಿಕನ್ ಮಳಿಗೆಗಳ ಉದ್ಘಾಟನೆ ಸೇರಿದಂತೆ ತಾಲೂಕಿನ ಕೊಂಡ್ಲಹಳ್ಳಿ, ನಾಗಸಮುದ್ರ, ಬೊಮ್ಮಕ್ಕನ ಹಳ್ಳಿ ಗ್ರಾಮಗಳ ಅಲ್ಪ ಸಂಖ್ಯಾತರ ಕಾಲೋನಿಗಳಲ್ಲಿ 5 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಶಂಕರಪ್ಪ, ತಾಪಂ ಇಒ ಎಂ.ಆರ್.ಪ್ರಕಾಶ್, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ, ವಾಟರ್ ಸಪ್ಲೆ ಎಇಇ ಹರೀಶ್, ಸಿಪಿಐ ವಸಂತ್ ವಿ.ಅಸೋದೆ, ಪಿಎಸ್ಐ ಜಿ.ಪಾಂಡುರಂಗ, ಸಿಡಿಪಿಒ ನವೀನ್ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ವಲಯಾರಣ್ಯಾಧಿಕಾರಿ ಹರ್ಷಾ ಹಾಗೂ ಇನ್ನಿತರರು ಇದ್ದರು.