ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಆರ್.ವಿಶಾಲ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಗರಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಲ್ಲ ಎಂಬ ಮಾಹಿತಿ ನೀಡುತ್ತಿದ್ದೀರಿ. ಆದರೆ ಯಾವ ನೀರಿನ ಮೂಲದಿಂದ ನಗರ-ಪಟ್ಟಣ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತದೆ. ನೀರಿನ ಮೂಲ, ದಾಸ್ತಾನು ವಿವರ, ದಾಸ್ತಾನು ಮಾಡಲಾದ ನೀರು ಎಷ್ಟು ತಿಂಗಳವರೆಗೆ ಪೂರೈಸಲು ಸಾಧ್ಯವಾಗುತ್ತದೆ ಎಂಬ ವಿವರ ನೀಡುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ನಗರದ ಕುಡಿಯುವ ನೀರಿನ ಮೂಲ, ಕೊಳವೆಬಾವಿಗಳ ವಿವರ, ಅಂತರಜಲ ಮಟ್ಟಗಳ ವಿವರ, ದುರಸ್ತಿಯಲ್ಲಿರುವ ಹಾಗೂ ಸುಸ್ಥಿತಿಯಲ್ಲಿರುವ ಕೊಳವೆಬಾವಿಗಳ ಮಾಹಿತಿ ಸಂಗ್ರಹಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕು. ಪರ್ಯಾಯ ನೀರಿನ ಲಭ್ಯತೆ, ಮೂಲಗಳನ್ನು ಗುರುತು ಮಾಡಿಕೊಂಡು ಅಗತ್ಯ ಬಿದ್ದಾಗ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ನಗರ ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿ, ಪ್ರಸ್ತುತ ಯಾವುದೇ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಿಲ್ಲೆಯ ೧೦ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ೨೩೮ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.
೧೫ ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ:ನಗರದ ತ್ಯಾಜ್ಯ ವಿಲೇವಾರಿ ಕ್ರಮಬದ್ಧವಾಗಿರಬೇಕು. ಮುಂದಿನ ೧೫ ದಿನದೊಳಗಾಗಿ ಈಗಾಗಲೇ ಪ್ರಗತಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಪೂರ್ಣಗೊಳಿಸಿ ಕಾರ್ಯರೂಪಕ್ಕೆ ತರಬೇಕು. ಹಸಿ ಕಸ, ಒಣ ಕಸಗಳ ಪ್ರತ್ಯೇಕ ಸಂಗ್ರಹ ಹಾಗೂ ವಿಲೇವಾರಿ, ನಗರದ ಸ್ವಚ್ಛತಾ ಕಾರ್ಯ, ಡ್ರೈನೇಜ್‌ಗಳ ಸ್ವಚ್ಛತಾ ಕಾರ್ಯವನ್ನು ಕೇವಲ ಪೌರಕಾರ್ಮಿಕರ ಮೇಲೆ ಬಿಡದೆ ಖುದ್ದಾಗಿ ಎಲ್ಲ ಮುಖ್ಯಾಧಿಕಾರಿಗಳು ಬೆಳಗಿನ ವೇಳೆ ನಗರ ಸಂಚಾರ ಮಾಡಿ ಖುದ್ದಾಗಿ ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ನಾನೇ ಖುದ್ದಾಗಿ ಅನಿರೀಕ್ಷಿತ ಭೇಟಿ ನೀಡಿ, ನಗರ ಸ್ವಚ್ಛತೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.
ನಗರದ ನೀರಿನ ಕರ, ಮನೆಗಳ ಕರ ಹಾಗೂ ಮಳಿಗೆಗಳ ಬಾಡಿಗೆಗಳನ್ನು ಕಾಲಮಿತಿಯೊಳಗೆ ಸಂಗ್ರಹ ಮಾಡಬೇಕು. ಕನಿಷ್ಠ ಶೇ.೭೫ ರಷ್ಟು ಪ್ರಮಾಣದಲ್ಲಿ ಕರ ಸಂಗ್ರಹ ಪ್ರಮಾಣ ಇರಬೇಕು. ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ೧೫ ದಿನದೊಳಗಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಗಡುವು ನೀಡಿದರು.ಜಿಲ್ಲೆಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ತಪಾಸಣೆ, ಚಿಕಿತ್ಸೆ ಪ್ರಗತಿ ಕುರಿತಂತೆ ಜಿಲ್ಲೆಯ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ವೈದ್ಯರಿಂದ ಪ್ರಗತಿಯ ಮಾಹಿತಿ ಪಡೆದುಕೊಂಡ ವಿಶಾಲ್, ಡಯಾಲಿಸಿಸ್ ಸೈಕಲ್‌ಗಳನ್ನು ಹೆಚ್ಚುಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಿ. ಡಯಾಲಿಸಿಸ್ ಯಂತ್ರ ನಿರ್ವಹಣೆಗೆ ಹೆಚ್ಚುವರಿ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಆರೋಗ್ಯ ಸುರಕ್ಷಾ ಸಮಿತಿಯ ಅನುದಾನದಲ್ಲಿ ಡಯಾಲಿಸಿಸ್ ಯಂತ್ರ ಸೇರಿದಂತೆ ವಿವಿಧ ವೈದ್ಯಕೀಯ ಉಪಕರಣಗಳ ದುರಸ್ತಿಗೆ ಕ್ರಮವಹಿಸಬೇಕು. ಕಾಲ್ಪೋಸ್ಕೋಪಿಕ್ ಯಂತ್ರ ಖರೀದಿಗೆ ಕ್ರಮವಹಿಸಿ, ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಾ ಕರ್ನಾಟಕ ಯೋಜನೆಯಡಿ ಪ್ರತಿ ಆಸ್ಪತ್ರೆಗಳಲ್ಲಿ ೧೦ ರಿಂದ ೨೦ ಲಕ್ಷ ರು. ಅನುದಾನವಿದೆ. ಈ ಆದಾಯದಲ್ಲಿ ಮಾರ್ಗಸೂಚಿಯಂತೆ ಔಷಧಿ ಖರೀದಿ, ಆಸ್ಪತ್ರೆಯ ಇತರ ಅಗತ್ಯತೆಗಳ ಖರೀದಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕ್ಯಾಂಪ್‌ಗಳನ್ನು ಹೆಚ್ಚು ಮಾಡಬೇಕು. ಹೆಚ್ಚು ಶಸ್ತ್ರ ಚಿಕಿತ್ಸೆಗಳು ನಡೆಯಬೇಕು. ತಾಲೂಕುವಾರು ವೈದ್ಯರಿಗೆ ಕ್ಯಾಂಪುಗಳ ಗುರಿ ನಿಗದಿಪಡಿಸಿ ಜನರಿಗೆ ಅರಿವು ಮತ್ತು ಮನವೊಲಿಸಿ ಶಸ್ತ್ರ ಚಿಕಿತ್ಸಾ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಶಾಲಾ, ಅಂಗಮವಾಡಿ ಶಿಕ್ಷಕಿಯರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ, ರಾಷ್ಟ್ರೀಯ ಅಂಧತ್ವ ನಿವಾರಣೆಯಡಿ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆಗಳು ಹೆಚ್ಚಾಗಬೇಕು ಎಂದು ಸೂಚನೆ ನೀಡಿದರು.
ಕುಷ್ಠರೋಗ, ಮಾನಸಿಕ ಆರೋಗ್ಯ ತಪಾಸಣೆ, ಎಚ್.ಐ.ವಿ. ತಪಾಸಣೆ, ಮುಂಜಾಗ್ರತಾ ಕ್ರಮವಾಗಿ ಟಿಬಿ ಪತ್ತೆ ತಪಾಸಣೆ, ಕ್ಯಾನ್ಸರ್, ಬಿಪಿ, ಡಯಾಬಿಟಿಕ್ ತಪಾಸಣೆಗಳನ್ನು ವಿಶೇಷ ಆಂದೋಲನದ ಮಾದರಿಯಲ್ಲಿ ತಪಾಸಣೆ ತೀವ್ರಗೊಳಿಸಬೇಕು. ತ್ವರಿತ ತಪಾಸಣೆ, ಚಿಕಿತ್ಸೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.ಅಂಧತ್ವ ನಿವಾರಣೆ ನಿಟ್ಟಿನಲ್ಲಿ ಆಶಾಕಿರಣ ಯೋಜನೆಯಡಿ ಉಚಿತ ಕನ್ನಡ ವಿತರಣೆ ಟೆಂಡರ್ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಉಚಿತ ಕನ್ನಡಕ ವಿತರಣೆಗೆ ಕ್ರಮವಹಿಸಬೇಕು. ಅಂಬ್ಯುಲೆನ್ಸ್ ಸೇವೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಳ ಮಾಡಿಕೊಳ್ಳಬೇಕು. ಕ್ಯಾಂಪ್‌ಗಳ ಮೂಲಕ ಸಾಮೂಹಿಕ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಬೇಕು. ವೈದ್ಯರ ಕೊರತೆ ಇದ್ದಲ್ಲಿ ಹುಬ್ಬಳ್ಳಿಯ ಕಿಮ್ಸ್ ತರಬೇತಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹಾವೇರಿ ಉಪವಿಭಾಗಾಧಿಕಾರಿ ಡಾ. ಕೆ. ಚನ್ನಪ್ಪ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖಿಜರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ ಇತರರು ಇದ್ದರು.