ಮಂಗಳೂರು: ಭಾರಿ ಮಳೆ ಪ್ರವಾಹದಿಂದಾಗಿ ರಸ್ತೆ ಹಾನಿ, ಗುಡ್ಡ ಕುಸಿತ, ಮನೆ ಕುಸಿತದಂತಹ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಮೂಲ ಸೌಕರ್ಯಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಮಳೆಗಾಲದಲ್ಲಿ ಯಾವುದೇ ರೀತಿಯ ಅವಘಡಗಳಾಗದಂತೆ ಇಲಾಖೆಗಳು ಸನ್ನದ್ಧರಾಗಿರಬೇಕು. ಕಳೆದ ಬಾರಿ ಹೆಚ್ಚಿನ ಪ್ರವಾಹ ಬಂದಿರುವ ಪ್ರದೇಶಗಳಲ್ಲಿ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದರು.ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮುಂಗಾರು ಪೂರ್ವ ಸಿದ್ಧತೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಣಿ-ಪಕ್ಷಿಗಳಿಗೆ ಮಳೆಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿ, ರಸ್ತೆ, ಕಟ್ಟಡಗಳ ಮೇಲೆ ಮಳೆ ಬಂದಾಗ, ಗಾಳಿ ಮಳೆಯಿಂದ, ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರೆವುಗೊಳಿಸಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಗಣಿಗಾರಿಕೆ ನಡೆದಂತಹ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಈಜಾಡಲು ಹೋಗುವುದರಿಂದ ಜೀವಹಾನಿ ಆಗುತ್ತಿರುವುದರಿಂದ ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಆಗಿರುವ ಗುಂಡಿಗಳಲ್ಲಿ ಈಜಾಟವನ್ನು ನಿಷೇಧಿಸಿದೆ ಎಂಬ ಬಗ್ಗೆ ಎಚ್ಚರಿಕಾ ಫಲಕವನ್ನು ಅಳವಡಿಸಬೇಕು. ಗಣಿಗಾರಿಕೆ ಗುಂಡಿಯಲ್ಲಿ ನಿಂತ ನೀರಲ್ಲಿ ಈಜಲು ಹೋಗಿ ಏನಾದರೂ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಗಣಿ ಮಾಲಕರು/ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಮೀನುಗಾರರ ಮರಣ ಪ್ರಮಾಣ ಹೆಚ್ಚುತ್ತಿದ್ದು, ಜೂನ್‍ನಿಂದ ಸೆಪ್ಟೆಂಬರ್ ಮೀನುಗಾರಿಕೆ ಚಟುವಟಿಗೆಗಳನ್ನು ಕಡ್ಡಾಯವಾಗಿ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಕ್ತ ನಿರ್ದೇಶನ ನೀಡಬೇಕು. ನಗರದಲ್ಲಿ ಜಲಸಿರಿ ಕಾಮಗಾರಿಗೆ ರಸ್ತೆಗಳನ್ನು ಅಗೆದಿದ್ದು, ಸರಿಯಾಗಿ ಗುಂಡಿಗಳನ್ನು ಮುಚ್ಚದಿರುವುದರಿಂದ ವಾಹನ ಸವಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯ ಕುರಿತು ನಗರಪಾಲಿಕೆ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು.ಕೆ. ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.