ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಶಿವಾನಂದ ಪಾಟೀಲ ಸೂಚನೆ

KannadaprabhaNewsNetwork |  
Published : Apr 07, 2025, 12:36 AM IST
6ಎಚ್‌ವಿಆರ್8 | Kannada Prabha

ಸಾರಾಂಶ

ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಹಿಂದಿನ ಸಭೆಗಳಲ್ಲಿ ಗೊತ್ತುಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಎಚ್ಚರಿಸಿದರು.

ಹಾವೇರಿ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದು, ಬೇಸಿಗೆ ಮಳೆಯಾಗುತ್ತಿದ್ದರೂ ಮುಂದಿನ ಎರಡು ತಿಂಗಳ ಬೇಸಿಗೆ ಅವಧಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗ ನೀರಿನ ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿದರೆ, ಇರುವ ನೀರನ್ನು ಮುಂದಿನ ಎರಡು ತಿಂಗಳ ಕಾಲ ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗಲಿದೆ. ನೀರಿನ ಸಂಗ್ರಹವಿದೆ ಎಂಬ ಕಾರಣಕ್ಕೆ ನಿರ್ಲಕ್ಷ್ಯತನ ತೋರದೆ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಹಿಂದಿನ ಸಭೆಗಳಲ್ಲಿ ಗೊತ್ತುಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚೆಯ ವೇಳೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಕಾರಣ ಬೇಸಿಗೆಯ ನೀರಿನ ಪೂರೈಕೆಗೆ ಅಗತ್ಯ ನೀರಿನ ಸಂಗ್ರಹವಿದೆ. ನಗರಕ್ಕೆ ಮೂರು ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ತುಂಗಭದ್ರಾ, ವರದಾ ಮತ್ತು ಹೆಗ್ಗೇರಿ ಕೆರೆ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ತುಂಗಭದ್ರಾ ನದಿಯಿಂದ 7 ಎಂಎಲ್‌ಡಿ ಹಾಗೂ ಹೆಗ್ಗೇರಿ ಕೆರೆಯಿಂದ 3 ಎಂಎಲ್‌ಡಿ ನೀರು ಪಡೆದು ನಗರದ 31 ವಾರ್ಡ್‌ಗಳಿಗೂ ಪ್ರತಿ 6 ಇಲ್ಲವೇ 9 ದಿನಕ್ಕೊಮ್ಮೆ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.

ಸಭೆಯಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ರುಚಿ ಬಿಂದಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಬಾರ್‌ ಬೆಂಡಿಂಗ್‌ ಕೆಲಸ ಮಾಡುತ್ತಿದ್ದಾಗಲೇ ಕಾರ್ಮಿಕ ಸಾವು

ಹಾವೇರಿ: ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ ನಗರದ ಡಿ ಮಾರ್ಟ್ ಕಂಪನಿಯ ಶೆಡ್‌ನಲ್ಲಿ ನಡೆದಿದೆ.

ರಾಣಿಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಮಂಜಪ್ಪ ಉಡಚಪ್ಪ ಮಾಯಮ್ಮನವರ(36) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಈತ ನಗರದ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ಡಿ ಮಾರ್ಟ್ ಕಂಪನಿಯ ಶೆಡ್‌ನಲ್ಲಿ ಮೃತಪಟ್ಟಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದಾಗ ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ ಎಂದು ಮೃತನ ತಾಯಿ ಹೊನ್ನಮ್ಮ ಮಾಯಮ್ಮನವರ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''