ಮಳೆಯಿಂದ ಅನಾಹುತ ಆಗದಂತೆ ಎಚ್ಚರ ವಹಿಸಿ: ತುಳಸಿ

KannadaprabhaNewsNetwork |  
Published : Jul 08, 2026, 02:30 AM IST
ಮಳೆ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ಎಚ್ಚರ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹೇಳಿದರು.

ಧಾರವಾಡ:

ಪ್ರಸ್ತುತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕುಡಿಯುವ ನೀರು, ರಸಗೊಬ್ಬರ, ಮೇವಿನ ಕೊರತೆ ಇಲ್ಲ. ಒಂದು ವೇಳೆ ಕೊರತೆ ಕಂಡುಬಂದಲ್ಲಿ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹೇಳಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿನ ಜೂ. 1ರಿಂದ ಜು. 6ರ ವರೆಗೆ ವಾಡಿಕೆ ಮಳೆ 150 ಮಿಮೀ ಪೈಕಿ 120 ಮಿಮೀ ಮಳೆಯಾಗಿದ್ದು, 27 ಮಿಮೀ ಕೊರತೆ ಇದೆ. ಈ ಹಂಗಾಮಿನಲ್ಲಿ ಶೇ. 90ರಷ್ಟು ಬಿತ್ತನೆಯ ಗುರಿಯಾಗಿದೆ. ಪ್ರಮುಖವಾಗಿ ಮುಸುಕಿನಜೋಳ, ಭತ್ತ, ಉದ್ದು, ಹೆಸರು, ಶೇಂಗಾ, ಸೋಯಾಅವರೆ ಹಾಗೂ ಹತ್ತಿ, ಕಬ್ಬು ಬೆಳೆಯಲಾಗಿದ್ದು, ಸಮರ್ಪಕ ರಸಗೊಬ್ಬರ ಹಾಗೂ ಬೀಜದ ಸಂಗ್ರಹ ಇದೆ ಎಂಬ ಮಾಹಿತಿ ನೀಡಿದರು.

ಸ್ಥಳೀಯ ನಗರ ಸಂಸ್ಥೆಗಳಲ್ಲಿ 100 ವಾರ್ಡ್‌ಗಳಿದ್ದು, ಯಾವುದೇ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. 80 ವಾರ್ಡ್‌ಗಳಲ್ಲಿ ಪ್ರತಿ ದಿನ ನೀರು ಪೂರೈಕೆ ಮಾಡುತ್ತಿದ್ದು, ಉಳಿದ 20 ವಾರ್ಡ್‌ಗಳಲ್ಲಿ 2ರಿಂದ 3 ದಿನದ ವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಐದು ಸ್ಥಳೀಯ ನಗರ ಸಂಸ್ಥೆಗಳಲ್ಲಿನ ಕೆರೆಗಳಲ್ಲಿ ಕುಡಿಯುವ ನೀರಿನ ಶೇಖರಣೆ ಸಾಕಷ್ಟು ಇರುವುದರಿಂದ ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ ಎಂದರು.

ಪೂರ್ವ ಮುಂಗಾರು ಹಂಗಾಮಿನಲ್ಲಿ ಒಂದು ಮನೆಗೆ ಹಾನಿಯಾಗಿದ್ದು, ₹ 1.20 ಲಕ್ಷ ಪರಿಹಾರ ವಿತರಿಸಲಾಗಿದೆ. ಐದು ಭಾಗಶಃ ಮನೆಗಳಿಗೆ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಿಸಿದೆ. ಸಿಡಿಲು ಬಡಿದು ಕವಲಗೇರಿಯಲ್ಲಿ ಒಂದು ಜೀವ ಹಾನಿಯಾಗಿದ್ದು, ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಕೃಷಿ, ತೋಟಗಾರಿಕೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ನಿನ್ನೆ 11.6 ಮಿಮೀ ಮಳೆ ದಾಖಲು

ಧಾರವಾಡ:ಮುಂಗಾರು ಹಂಗಾಮಿಗೆ ಪೂರಕವಾಗಿ ಮಂಗಳವಾರವೂ ಮಳೆಯು ಮುಂದುವರಿದಿದೆ. ಜುಲೈ ಮೊದಲ ದಿನದಿಂದ 7ರ ವರೆಗೆ ಜಿಲ್ಲೆಯಲ್ಲಿ ಬಂದ ಮಳೆ ಪೈಕಿ ಮಂಗಳವಾರ ಅತೀ ಹೆಚ್ಚು ಮಳೆಯಾಗಿರುವುದು ದಾಖಲಾಗಿದೆ. ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಜು. 1ರಿಂದ ಜು. 7ರ ವರೆಗೆ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಜಾಸ್ತಿಯಾಗುತ್ತಲೇ ಬಂದಿದ್ದು, ಮಂಗಳವಾರ ಒಂದೇ ದಿನ ಅತೀ ಹೆಚ್ಚು 11.6 ಮಿಮೀ ಮಳೆಯಾಗಿದೆ. ಜು. 1ರಂದು 1.2 ಮಿಮೀ, 2ರಂದು 1.9 ಮಿಮೀ, 3ರಂದು 2.6 ಮಿ.ಮೀ, 4ರಂದು 2.7 ಮಿಮೀ, 5ರಂದು 7.9 ಮಿಮೀ, 6ರಂದು 8.3 ಮಿಮೀ ಹಾಗೂ 7ರಂದು 11.6ರಷ್ಟು ಮಳೆಯಾಗಿದೆ. ಮಂಗಳವಾರ ಧಾರವಾಡದಲ್ಲಿ 16.8, ಹುಬ್ಬಳ್ಳಿಯಲ್ಲಿ 9.5, ಕಲಘಟಗಿಯಲ್ಲಿ 13.8, ಕುಂದಗೋಳದಲ್ಲಿ 10.4, ನವಲಗುಂದದಲ್ಲಿ 7.3, ಹುಬ್ಬಳ್ಳಿ ನಗರದಲ್ಲಿ 6.9, ಅಳ್ನಾವರದಲ್ಲಿ 21.3 ಹಾಗೂ ಅಣ್ಣಿಗೇರಿಯಲ್ಲಿ 5.8 ಮಿಮೀ ಮಳೆ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಕೋರ್ಟಿಗೀಗ ಹೆಚ್ಚುವರಿ ಭದ್ರತೆ
ಉಡುಪಿ ಜಿಲ್ಲೆ ‘ಸಾಸ್‌ನ ಪ್ರಭಾವಿ ಜಿಲ್ಲೆ’