ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಡೆಂಘೀ ಜ್ವರ ವ್ಯಾಪಾಕವಾಗಿ ಹರಡುತ್ತಿದ್ದು, ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಸಹಯೋಗ ಹಾಗೂ ಮಾರ್ಗದರ್ಶನದೊಂದಿಗೆ ಡೆಂಘೀ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡಲೇ ಆರಂಭಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ತಿಳಿಸಿದರು.ಅವರು, ತಾ.ಪಂ ಸಭಾಂಗಣದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ತಾ.ಪಂಚಾಯಿತಿ ಸಹಯೋಗ ಆಯೋಜಿಸದ್ದ ಡೆಂಘೀ ನಿಯಂತ್ರಣ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶುಚಿತ್ವ ಕಾಪಾಡುವಲ್ಲಿ ಸಭೆ ನಡೆಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಾದರೂ ಡಂಘೀ ಹರಡುವ ಸಂಭವ ಇದೆ. ಮುನ್ನೆಚ್ಚರಿಕೆ ಕ್ರಮವಹಿಸುವ ಮೂಲಕ ಇದನ್ನು ನಿಯಂತ್ರಸಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎನ್.ಕಾಶಿ, ಡೆಂಘೀ ಜ್ವರ ಯಾವುದೇ ಭಾಗದಲ್ಲಿ ಕಾಣಿಸಿಕೊಂಡರೂ ಅದನ್ನು ನಿಯಂತ್ರಿಸುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಾಡಬೇಕಿದೆ. ಈಗಾಗಲೇ ತಾಲೂಕು ಆಡಳಿತ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ಸ್ವಚ್ಚತೆಗೆ ಆದ್ಯತೆ ನೀಡಬೇಕಿದೆ. ತಾಲೂಕಿನಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಡೆಂಘೀ ನಿಯಂತ್ರಣ ಈಗಾಗಲೇ ಕಾಯೋನ್ಮುಖರಾಗಿದ್ಧಾರೆ. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗವೂ ಅರಿವು ಮೂಡಿಸುವ ಕಾರ್ಯವನ್ನು ಮುಂದುವರೆಸಿದೆ. ಡೆಂಘೀ ಜ್ವರ ಕಾಣಿಸಿಕೊಂಡರೆ ಯಾರೂ ಭಯಬೀಳದೆ ಸಮೀಪದ ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು. ತಾಲೂಕು ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮ ಕೈಗೊಂಡಿದೆ ಎಂದರು.ಸಭೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಸಿಡಿಪಿಒ ಹರಿಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಸಂತೋಷ್, ಸಂಪತ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
-------ಪೋಟೋ-೯ಸಿಎಲ್‌ಕೆ೪
ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ, ಶಿಕ್ಷಣ ಹಾಗೂ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡೆಂಘೀ ನಿಯಂತ್ರಣ ಜಾಗೃತಿ ಸಭೆ ನಡೆಸಲಾಯಿತು.