ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿದ್ದು, ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ದ.ಕ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.
ಮಂಗಳೂರು: ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿದ್ದು, ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ದ.ಕ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.ಅವರು ಮಂಗಳವಾರ ದ.ಕ. ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಈಗಾಗಲೇ ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ 22 ಕೋಟಿ ರು. ಅನುದಾನ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ರಾಜ್ಯ ಕಛೇರಿಯಿಂದ ತಿಳಿಸಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಸಹಾಯಧನ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ ಫಲಾನುಭವಿಗಳ ಮಾಹಿತಿ ಪಡೆಯಲು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಇಲಾಖೆಯ ಮಾಹಿತಿಯಲ್ಲಿ ಜೀವಂತವಿರುವ ಗೃಹಲಕ್ಷ್ಮಿ ಫಲಾನುಭವಿಯು ಮರಣ ಹೊಂದಿರುವುದಾಗಿ ದಾಖಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದರು.ಮರಣ ಹೊಂದಿದ ಫಲಾನುಭವಿಯ ಹೆಸರು, ಖಾತೆ ಸಂಖ್ಯೆ ಹಾಗೂ ಬ್ಯಾಂಕಿನ ವಿವರಗಳು ಇದ್ದಲ್ಲಿ ಬ್ಯಾಂಕ್ ಮುಖಾಂತರ ಕ್ರಮಕೈಗೊಳ್ಳಬಹುದು. ಇಲ್ಲವಾದಲ್ಲಿ ಗ್ರಾಮದಲ್ಲಿ ಮರಣಹೊಂದಿದವರ ಮಾಹಿತಿ ಗ್ರಾಮ ಕರಣಿಕರ ಕಚೇರಿಯಲ್ಲಿ ಲಭ್ಯವಿರುತ್ತದೆ. ಅಂತಹ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಡೆದಲ್ಲಿ ಮರಣ ಹೊಂದಿದ ಫಲಾನುಭವಿಯ ಖಾತೆಗೆ ಸಹಾಯಧನ ಬಿಡುಗಡೆ ಮಾಡುವುದನ್ನು ತಡೆಹಿಡಿಯಬಹುದು. ಮೃತ ಫಲಾನುಭವಿಯ ಮರಣ ಪ್ರಮಾಣ ಪತ್ರ ಬಂದ ತಕ್ಷಣ ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ತೆಗೆಯಬೇಕು. ಅವರ ಹೆಸರು, ಬ್ಯಾಂಕ್ ವಿವರಗಳಿದ್ದಲ್ಲಿ ಬ್ಯಾಂಕ್ ಮುಖಾಂತರ ಖಾತೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.ಪಡಿತರ ಚೀಟಿ ಸೇವೆಗಳಿಗಾಗಿ ಬಯೋಮೆಟ್ರಿಕ್ ಅಥವಾ ಹೆಬ್ಬೆರಳು ಗುರುತನ್ನು ನೀಡಲು ಸಂಬಂಧಪಟ್ಟ ಕೇಂದ್ರಗಳಿಗೆ ಭೇಟಿ ನೀಡಿದಾಗ ಹೆಬ್ಬೆರಳು ಗುರುತು ಮ್ಯಾಚ್ ಆಗದಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆ ತುಂಬಾ ವಯಸ್ಸಾದ, ನಡೆಯಲು ಅಸಾಧ್ಯವಾದ ಪಡಿತರ ಚೀಟಿದಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂತಹ ಸಮಸ್ಯೆಗೆ ವಿನಾಯಿತಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.ನೆಲ್ಯಾಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಬಸ್ ನಿಲ್ದಾಣ ಆದ ನಂತರ 2 ಮನೆಗಳಿಗೆ 94 ಸಿ ನೀಡಲಾಗಿದೆ. 3 ಮನೆಗಳಿಗೆ ರಸ್ತೆ ನಿರ್ಮಿಸಲು ಸದರಿ ಜಾಗವನ್ನು ಉಪಯೋಗಿಸಿಕೊಳ್ಳಲಾಗಿದೆ. ಸುಮಾರು 30 ಸೆಂಟ್ಸ್ ಜಾಗ ಕೆ.ಎಸ್.ಆರ್.ಟಿ.ಸಿ.ಗೆ ಅನುಮೋದನೆಯಾದ ನಂತರ ಒತ್ತುವರಿಯಾಗಿದೆ. ಜಾಗವನ್ನು ಒತ್ತುವರಿ ಮಾಡಿರುವವರಿಗೆ ಸೂಕ್ತ ಕ್ರಮವಾಗಬೇಕೆಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರು ತಿಳಿಸಿದಾಗ ಈ ಬಗ್ಗೆ ಪರಿಶೀಲನೆ ಮಾಡಲಾಗುವುದೆಂದು ಇಲಾಖಾಧಿಕಾರಿಗಳು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವಂತೆ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.ಯುವನಿಧಿ ಯೋಜನೆಯಡಿಯಲ್ಲಿ ಲಭ್ಯವಿರುವ ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ನೀಡಬೇಕು. ತಾಲೂಕು ಮಟ್ಟದಲ್ಲಿ ಯುವಕರಿಗೆ ಕೌಶಲ ತರಬೇತಿಗಳನ್ನು ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜಾ, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.