- ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ಕೃತ್ಯ ಅಕ್ಷಮ್ಯ: ಸತೀಶ ಪೂಜಾರಿ - - -
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಮತಾಂಧರು ಕಲ್ಲು ತೂರಿದ್ದನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶ್ರೀ ಜಯದೇವ ವೃತ್ತದಲ್ಲಿ ಹಿಂಜಾವೇ ಮುಖಂಡರು, ಕಾರ್ಯಕರ್ತರು, ಪಾಪಿ ಪಾಕಿಸ್ತಾನಿ ಮನಃಸ್ಥಿತಿಯ ಜಿಹಾದಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಹಿಂ.ಜಾ.ವೇ. ಪ್ರಾಂತ್ಯ ಕಾರ್ಯದರ್ಶಿ ಸತೀಶ ಪೂಜಾರಿ ಮಾತನಾಡಿ, ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಮೆರವಣಿಗೆ ಹೋಗುವ ವೇಳೆ ಅಲ್ಲಿನ ಮಸೀದಿಯಲ್ಲಿ ನಮಾಜ್ ಸಮಯ ಮುಗಿದಿತ್ತು. ಆದರೂ, ಮೆರವಣಿಗೆ ಆ ಮಾರ್ಗದಲ್ಲಿ ಸಾಗದಂತೆ ತಡೆಯಲು ಪೊಲೀಸರ ಮೂಲಕ ಪ್ರಯತ್ನಿಸಲಾಯಿತು. ಅದು ಸಾಧ್ಯವಾಗದಿದ್ದಾಗ ಮಸೀದಿಯ ಮೌಲ್ವಿ ಕುಮ್ಮಕ್ಕಿನಿಂದ ಮೆರವಣಿಗೆ ಮೇಲೆ ಚಪ್ಪಲಿ, ಕಲ್ಲು ಎಸೆದಿದ್ದಾರೆ ಎಂದು ಆರೋಪಿಸಿದರು.ಕಲ್ಲೇಟು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಗೂ ಬಿದ್ದು, ರಕ್ತಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವೇ ಕೆಲವರನ್ನು ಬಂಧಿಸಿದರೆ ಸಾಲದು. ರಾಜ್ಯದ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ರಾಜಕಾರಣ ಬಿಡಬೇಕು. ಪೊಲೀಸರ ಮೇಲೆ ಹಲ್ಲೆ ಮಾಡುವವರ ಮೇಲೂ ದೂರು ದಾಖಲಿಸಲು ಹಿಂಜರಿಯುವಷ್ಟು ಭಯದ ವಾತಾವರಣವಿದೆ. ಬಾಗಲಕೋಟೆ ಘಟನೆಯಲ್ಲಿ ಮಸೀದಿ ಆಡಳಿತ ಮಂಡಳಿ ಹಾಗೂ ಮೌಲ್ವಿಯನ್ನೇ ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ತಾಕೀತು ಮಾಡಿದರು.
ಮಾಜಿ ಮೇಯರ್ ಎಸ್.ಟಿ.ವೀರೇಶ, ಮುಖಂಡರಾದ ಪುನೀತ, ಆನಂದ, ಪರಶುರಾಮ, ನವೀನ, ಅವಿನಾಶ, ವಿಶಾಲ್, ನಾಗರಾಜ ಸುರ್ವೆ, ನಾರಾಯಣ, ಚೇತನ, ರಾಘವೇಂದ್ರ, ವೀರೇಶ ಗೌಳಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
(ಕೋಟ್) ಅನೇಕ ಮುಸಲ್ಮಾನರು ಸಾಮಾಜಿಕ ಜಾಲತಾಣಗಳಲ್ಲಿ ಬಾಗಲಕೋಟೆ ಕೃತ್ಯ ಖಂಡಿಸಿರುವುದು ಸ್ವಾಗತಾರ್ಹ. ಅಂತಹ ಮುಸಲ್ಮಾನರ ಜೊತೆ ಹಿಂದೂ ಸಮಾಜವೂ ನಿಲ್ಲುತ್ತದೆ. ಸಮಾಜದ ಶಾಂತಿ ಕದಡುವಂತಹ ಹೀನ ಕೃತ್ಯ ಮಾಡಿದವರ ವಿರುದ್ಧ ದೇಶಭಕ್ತ ಮುಸಲ್ಮಾನರೂ ಧ್ವನಿ ಎತ್ತಬೇಕು.
-21ಕೆಡಿವಿಜಿ9, 10: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಶನಿವಾರ ಹಿಂ.ಜಾ.ವೇ. ಪ್ರತಿಭಟಿಸಿತು.