ಸಂಚಾರ ನಿಯಮ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

KannadaprabhaNewsNetwork |  
Published : Oct 21, 2025, 01:00 AM IST
19ಎಚ್‌ ಪಿಟಿ1- ಹೊಸಪೇಟೆಯ ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಇದ್ದರು. | Kannada Prabha

ಸಾರಾಂಶ

ಎಲ್ಲೆಂದರೆಲ್ಲಿ ಭರದಿಂದ ನುಗ್ಗುವ ರ‍್ಯಾಶ್ ಡ್ರೈವಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದೆ.

ಹೊಸಪೇಟೆ: ನಗರದಲ್ಲಿ ಕರ್ಕಶ ಶಬ್ದ ಹರಡಿಸುವ ಹಾಗೂ ಬೈಕ್‌ಗಳ ಸಂಚಾರ, ಮೈನಿಂಗ್ ಲಾರಿಗಳ ರ‍್ಯಾಶ್ ಡ್ರೈವಿಂಗ್ ಮತ್ತು ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಹಾವಳಿ ಹೆಚ್ಚಾಗಿದ್ದು, ಇಂತಹವರ ವಿರುದ್ಧ ಶೀಘ್ರ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ ನೀಡಿದರು.

ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸಪೇಟೆ, ನಗರ ವ್ಯಾಪ್ತಿಯಲ್ಲಿ ಕೆಲವು ಯುವಕರು ಬೈಕ್‌ಗಳನ್ನು ಕರ್ಕಶ ಶಬ್ದ ಹರಡಿಸುತ್ತಾ, ಎಲ್ಲೆಂದರೆಲ್ಲಿ ಭರದಿಂದ ನುಗ್ಗುವ ರ‍್ಯಾಶ್ ಡ್ರೈವಿಂಗ್ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದೆ. ಹೆದ್ದಾರಿಗಳಲ್ಲಿ ಮೈನಿಂಗ್ ಲಾರಿಗಳು ರ‍್ಯಾಶ್ ಡ್ರೈವಿಂಗ್ ಮಾಡುತ್ತಿರುವ ಬಗ್ಗೆ ದೂರು ಹೆಚ್ಚಾಗಿವೆ. ಅಂತಹ ವಾಹನಗಳನ್ನು ಸೀಜ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಂದು ನಿಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥರಿಗೆ ಸೂಚಿಸಿದರು.ಹರಪನಹಳ್ಳಿ ಮತ್ತು ಕೂಡ್ಲಿಗಿ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಆಟೋ ಸ್ಟಾಂಡ್ ನಿರ್ಮಾಣ ಮಾಡಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಮಾಸಾಂತ್ಯದಲ್ಲಿ ಸ್ಥಳ ಗುರುತಿಸಿ ವರದಿ ನೀಡಬೇಕು. ಹೊಸಪೇಟೆ ನಗರದಲ್ಲಿ ಪುನೀತ್ ರಾಜಕುಮಾರ್ ವೃತ್ತದ ಬಳಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ನಗರಸಭೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಂಟಿಯಾಗಿ ಸ್ಥಳ ಪರಿವೀಕ್ಷಣೆ ಮಾಡಿ ಸ್ಥಳ ಗುರುತಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಿರುವು ರಸ್ತೆಗಳ, ವಿಭಜಕ ರಸ್ತೆಗಳ ಮಾರ್ಗಸೂಚಕ ನಾಮಫಲಕಗಳನ್ನು ಕಡ್ಡಾಯವಾಗಿ 200 ಮೀಟರ್ ಮುಂದೆಯೇ ಅಳವಡಿಸಿ, ಜಿಲ್ಲಾ ವ್ಯಾಪ್ತಿಯಲ್ಲಿ ನಾನೇ ಖುದ್ದು ಗಮನಿಸಿದ್ದೇನೆ. ಹೆದ್ದಾರಿಯಲ್ಲಿ ಈಗಿರುವ ನಾಮಫಲಕಗಳು ಸಂಚರಿಸುವವರಿಗೆ ತೀವ್ರ ಗೊಂದಲ ಮೂಡಿಸುತ್ತವೆ. ತಿರುವುಗಳ ಮುಂದೆ ಫಲಕಗಳನ್ನು ಅಳವಡಿಸಿರುವುದರಿಂದ ಚಾಲಕರಿಗೆ ತೊಂದರೆಯಾಗುತ್ತದೆ; ಇದರಿಂದ ಅಪಘಾತಕ್ಕೂ ಕಾರಣವಾಗಲಿದೆ. ಶೀಘ್ರ ಕ್ರಮ ವಹಿಸಬೇಕು. ಎನ್‌ಎಚ್50ರಲ್ಲಿ ಬರುವ ಟನಲ್ ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಿದರು.

ನಗರದ ಭಟ್ಟರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಆಯುಕ್ತರು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ಹೊಸಪೇಟೆ ನಗರದ ಆನಂತಶಯನಗುಡಿ ಬಳಿಯಿರುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ ರಸ್ತೆ ಸುಧಾರಣೆ ಕೈಗೊಳ್ಳಲು ಕ್ರಮ ವಹಿಸಬೇಕು. ನಗರದ ನ್ಯಾಯಾಲಯದ ಮುಂದಿನ ರಸ್ತೆ ಹಾಗೂ ನ್ಯಾಷನಲ್ ಶಾಲೆ ಮತ್ತು ಕಾಲೇಜು ಮುಂದಿನ ರಸ್ತೆಯಲ್ಲಿ ರಸ್ತೆ ತಡೆಗಳನ್ನು ಅಳವಡಿಸಲು ಸ್ಥಳ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಪಿಡಬ್ಲ್ಯುಡಿ ಇಇ ದೇವದಾಸ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಶೀರಿಷ್, ಸಾರಿಗೆ ಅಧಿಕಾರಿ ಧನರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ