ರಾಜ್ಯಾದ್ಯಂತ ಭದ್ರತೆಗೆ ಕಠಿಣ ಕ್ರಮ ಕೈಗೊಳ್ಳಿ: ಸಿಎಂ

KannadaprabhaNewsNetwork | Updated : May 11 2025, 09:09 AM IST
Follow Us

ಸಾರಾಂಶ

  ಪ್ರಮುಖ ಸ್ಥಳಗಳಲ್ಲಿ ಮಾಕ್‌ ಡ್ರಿಲ್‌ ನಿರ್ವಹಿಸಬೇಕು. ಜತೆಗೆ ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ  

 ಬೆಂಗಳೂರು : ‘ರಾಜ್ಯದಲ್ಲಿ ಜನರ ರಕ್ಷಣೆ ಹಾಗೂ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಮುಖ ಸ್ಥಳಗಳಲ್ಲಿ ಮಾಕ್‌ ಡ್ರಿಲ್‌ ನಿರ್ವಹಿಸಬೇಕು. ಜತೆಗೆ ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾನೂನು ಸುವ್ಯವಸ್ಥೆ ಕುರಿತು ಶನಿವಾರ ವಿಧಾನಸೌಧದಲ್ಲಿ ಗೃಹ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ವರ್ಚುಯಲ್‌ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ಭದ್ರತೆ ವಿಚಾರದಲ್ಲಿ ರಾಜಿ ಆಗಬಾರದು. ಎಲ್ಲಾ ಕಮಿಷನರೇಟ್‌ಗಳು ಎಚ್ಚರಿಕೆಯಿಂದ ಇರಬೇಕು. ಪ್ರಮುಖ ಸ್ಥಾವರಗಳಲ್ಲಿ ಭದ್ರತೆ ಹೆಚ್ಚಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಡೆ ವಿಶೇಷ ನಿಗಾ ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಕಿಸ್ತಾನ ಹಾಗೂ ಭಾರತ ನಡುವೆ ಕದನ ವಿರಾಮ ಘೋಷಣೆ ಆಗಿದ್ದರೂ ಎಚ್ಚರಿಕಾ ಕ್ರಮಗಳನ್ನು ಮುಂದುವರೆಸಬೇಕು ಎಂದು ಸ್ಪಷ್ಟಪಡಿಸಿದರು. ಗೃಹ ಸಚಿವರು, ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು, ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಪೊಲೀಸ್‌ ಇಲಾಖೆ ಸಂಪೂರ್ಣ ಎಚ್ಚರಿಕೆಯಿಂದ ಇರಬೇಕು. ಕೇಂದ್ರದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು, ವರಿಷ್ಠಾಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು. ಎಲ್ಲೆಲ್ಲಿ ಕಮಿಷನರೇಟ್‌ ಇರುತ್ತದೆಯೋ ಅಲ್ಲಿ ಪ್ರತಿನಿತ್ಯ ಸುದ್ದಿಗಾರರಿಗೆ ವಿವರಣೆ ನೀಡಬೇಕು. ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸದಾ ಅಲರ್ಟ್‌ ಆಗಿರಬೇಕು: ಪೌರ ರಕ್ಷಣಾ ವ್ಯವಸ್ಥೆ ಬಲಪಡಿಸಿ ಅವರಿಗೆ ತರಬೇತಿ ನೀಡಬೇಕು. ವೈದ್ಯಕೀಯ ತುರ್ತುಪರಿಸ್ಥಿತಿ ಸನ್ನಿವೇಶನ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಅಗ್ನಿಶಾಮಕ ದಳ ಸೇರಿ ಎಲ್ಲಾ ನಾಗರಿಕ ಸೇವಾ ಘಟಕಗಳೂ ಅಲರ್ಟ್‌ ಆಗಿ ಇರಬೇಕು. ಪೊಲೀಸರಿಗೆ ಮುಂದಿನ ನಿರ್ದೇಶನದವರೆಗೆ ರಜೆ ನೀಡಬಾರದು. 24/7 ಎಲ್ಲಾ ಅಧಿಕಾರಿಗಳೂ ಸಹ ಅಲರ್ಟ್‌ ಆಗಿ ಇರಬೇಕು ಎಂದಿರುವುದಾಗಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ನಿರಂತರ ಫ್ಯಾಕ್ಟ್‌ಚೆಕ್‌ ಆಗಬೇಕು:

ಗುಪ್ತಚರ ಬಲಪಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು. ನಿರಂತರವಾಗಿ ಫ್ಯಾಕ್ಟ್‌ ಚೆಕ್ ಗಿ ಮಾಡುತ್ತಿರಬೇಕು. ಸುಳ್ಳು ಸುದ್ದಿ ಎಂದು ಗೊತ್ತಾದ ತಕ್ಷಣ ಆರಂಭದಲ್ಲೇ ಅದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ವೈದ್ಯಕೀಯ ಆಸ್ಪತ್ರೆಗಳು, ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳು, ಎಲ್ಲವುಗಳ ಭದ್ರತೆ ಹೆಚ್ಚಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.ಸಭೆಯಲ್ಲಿ ಸಚಿವರಾದ ಡಾ.ಜಿ. ಪರಮೇಶ್ವರ್‌, ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಆಹಾರ ಬೆಲೆ ನಿಯಂತ್ರಿಸಿ: ಸಿಎಂಕೃತಕ ಅಭಾವ ಸೃಷ್ಟಿ ಮಾಡಿ ಆಹಾರ ಧಾನ್ಯ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪ್ರಯತ್ನ ಮಾಡಬಹುದು. ಇಂತಹ ಕಾಳಸಂತೆಕೋರರ ಬಗ್ಗೆ ನಿಗಾ ವಹಿಸಬೇಕು. ಪರಿಸ್ಥಿತಿಯ ಲಾಭ ಪಡೆದು ಆಹಾರ ಧಾನ್ಯಗಳ ಬೆಲೆ ಏರಿಕೆ ಆಗದಂತೆ ನಿಯಂತ್ರಿಸಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಕರಾವಳಿ ಭಾಗದಲ್ಲಿ ಭದ್ರತೆ ಬಿಗಿಗೊಳಿಸಿ. ಕೋಮು ಗೂಂಡಾಗಳ ಪಟ್ಟಿ ಪರಿಷ್ಕರಣೆ ಮಾಡಿ ಕಟ್ಟುನಿಟ್ಟಿನ ನಿಗಾವಹಿಸಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುವವರ ಪಟ್ಟಿ ಸಿದ್ಧಪಡಿಸಬೇಕು. ಮುಖ್ಯವಾಗಿ ಕೋಮು ಸಾಮರಸ್ಯ ಕದಡುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾಮರಸ್ಯ ಕದಡುವ ಕೆಲಸ ಮಾಡುವ ಕೋಮು ಗೂಂಡಾಗಳು ಇರುತ್ತಾರೆ. ಅಂತಹವರ ಪಟ್ಟಿ ಮಾಡಿ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

ವಿಶೇಷವಾಗಿ ಕರಾವಳಿಯಲ್ಲಿ ಭದ್ರತೆ ಬಿಗಿಗೊಳಿಸಬೇಕು. ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಿರಂತರ ಗಸ್ತು ವ್ಯವಸ್ಥೆ ಮಾಡಬೇಕು.

ಪರಿಸ್ಥಿತಿ ದುರುಪಯೋಗ ಪಡಿಸಿಕೊಂಡು ದೇಶದ, ರಾಜ್ಯದ ಸಹಭಾಳ್ವೆಗೆ ಧಕ್ಕೆ ತರುವ, ಕೋಮುಭಾವನೆ ಕೆರಳಿಸಿ, ಕೋಮು ವಿಭಜನೆ ತರಲು, ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುತ್ತಿರುವ ಎಲ್ಲರ ಪಟ್ಟಿ ಸಿದ್ದಪಡಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ತನ್ಮೂಲಕ ಕೋಮುಸಾಮರಸ್ಯ ಕದಡುವ ಯಾವುದೇ ಶಕ್ತಿಗಳಿಗೂ ಅವಕಾಶ ನೀಡಬಾರದು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.

ಪಾಕಿಸ್ತಾನದ ಮಕ್ಕಳ ಬಗ್ಗೆ ಕೇಂದ್ರಕ್ಕೆ ಪತ್ರ: ಪಾಕಿಸ್ತಾನದ ಎಲ್ಲ ಪ್ರಜೆಗಳನ್ನು ರಾಜ್ಯದಿಂದ ಹೊರಹಾಕುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಬಳಿ ಮೂವರು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾತ್ರ ಇದ್ದಾರೆ. ಅವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾಕಿಸ್ತಾನದ ವ್ಯಕ್ತಿ ಇಲ್ಲಿನ ಮಹಿಳೆಯೊಬ್ಬರನ್ನು ಮದುವೆಯಾಗಿ ಮೂರು ಮಕ್ಕಳಾಗಿವೆ. ಆತ ಪಾಕಿಸ್ತಾನಕ್ಕೆ ವಾಪಸು ಹೋಗಿದ್ದಾನೆ. ಆದರೆ ಇವರನ್ನು ಕರೆದುಕೊಂಡು ಹೋಗಿಲ್ಲ. ಹೀಗಾಗಿ ಮೂವರು ಮಕ್ಕಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಗಡಿವರೆಗೂ ಕರೆದುಕೊಂಡು ಹೋಗಿದ್ದರೂ ಅಲ್ಲಿ ಮಕ್ಕಳನ್ನು ಕರೆದುಕೊಳ್ಳಲು ಯಾರೂ ಬಂದಿರಲಿಲ್ಲ. ಹೀಗಾಗಿ ವಾಪಸು ಕರೆದುಕೊಂಡು ಬಂದಿದ್ದೇವೆ. ಅವರಿಗೆ ಸೂಕ್ತ ರಕ್ಷಣೆ ಒದಗಿಸಿದ್ದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.ಕದನ ವಿರಾಮ ಸಂತೋಷ, ಆದರೂ ನಾವು ಎಚ್ಚರದಿಂದ ಇರಬೇಕು:ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ವಿರಾಮ ಘೋಷಣೆಯಾಗಿದೆ. ಎರಡೂ ರಾಷ್ಟ್ರಗಳು ಒಪ್ಪಿ ಕದನ ವಿರಾಮ ಘೋಷಿಸಿದ್ದರೆ ಬಹಳ ಸಂತೋಷ. ಆದರೂ ಎಚ್ಚರಿಕೆಯಿಂದ ಇರಬೇಕು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕದನ ವಿರಾಮ ಘೋಷಿಸಿದ್ದಾರೆಂದರೆ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲ್ಲ ಎಂದಲ್ಲ. ಕದನ ವಿರಾಮ ಘೋಷಿಸಿದ್ದರೂ ಯಾವುದೇ ಕಾರಣಕ್ಕೂ ಭಯೋತ್ಪಾದಕ ಕೃತ್ಯಗಳನ್ನು ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಯುದ್ಧ ವಿರಾಮ ಘೋಷಣೆಯಾಗಿದೆ ಎಂಬ ಬಗ್ಗೆ ಮಾಹಿತಿ ಬಂದಿದೆ. ರಕ್ಷಣಾ ಸಚಿವಾಲಯದಿಂದ ಬಂದ ಮಾಹಿತಿ ಪ್ರಕಾರ ಮೇ 10ರ ಸಂಜೆ 5 ಗಂಟೆಯಿಂದ ಅನ್ವಯವಾಗುವಂತೆ ಅಧಿಕೃತವಾಗಿ ಕದನ ವಿರಾಮ ಘೋಷಣೆಯಾಗಿದೆ. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ವಿಧಾನಸೌಧದಲ್ಲಿ ಶನಿವಾರ ಗೃಹ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ರಕ್ಷಣಾ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಸಿದ ಸಿದ್ದರಾಮಯ್ಯ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.