ಬೀದಿ ನಾಯಿಗಳ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮವಹಿಸಿ: ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Jul 22, 2026, 01:30 AM IST
21ಕೆಪಿಆರ್‌ಸಿಆರ್‌ 02 | Kannada Prabha

ಸಾರಾಂಶ

ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪೂವಿತಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಬೀದಿ ನಾಯಿಗಳಿಂದ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ದಾಳಿ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಇಂದು ಸಭೆ ಕರೆಯಲಾಗಿದ್ದು ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸೂಚಿಸಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಚರ್ಚಿಸಲು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಗಾಯಗೊಂಡಿರುವ ಹಾಗೂ ಕೆಲವು ದುರ್ಘಟನೆಗಳಲ್ಲಿ ಮಕ್ಕಳ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಬೀದಿ ನಾಯಿಗಳಿಗೆ ಆಹಾರ ಹಾಕುವವರು ಹಾಗೂ ಮಟನ್ ಅಂಗಡಿಗಳ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನಿಯಮ ಬಾಹಿರವಾಗಿ ವಿಲೇವಾರಿ ಮಾಡುವವರ ವಿರುದ್ಧ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಮಟನ್ ತ್ಯಾಜ್ಯ ಸಾಗಿಸುವ ವಾಹನಗಳ ಮೇಲೂ ನಿಯಮ ಉಲ್ಲಂಘನೆ ಕಂಡು ಬಂದರೆ ದಂಡನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕ್ರೂರ ಹಾಗೂ ಅಕ್ರಮಣಕಾರಿ ನಾಯಿಗಳು ಕಂಡುಬಂದರೆ ತಕ್ಷಣ ಸಂಬಂಧಿತ ನೋಡಲ್ ಅಧಿಕಾರಿಗಳು ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ಪಡೆದ ತಕ್ಷಣ ಸಂಬಂಧಿಸಿದವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರತಿ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿಯೂ ಸಭೆ ನಡೆಸಿ ಬೀದಿ ನಾಯಿಗಳನ್ನು ಗುರುತಿಸುವುದು, ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಮಟನ್ ಅಂಗಡಿಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ನಿರಂತರ ನಿಗಾ ವಹಿಸುವುದರ ಜೊತೆಗೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂದರು.

ಬೀದಿ ನಾಯಿಗಳನ್ನು ಹಿಡಿಯುವ ಹಾಗೂ ಅವುಗಳ ನಿರ್ವಹಣೆಯ ಎಲ್ಲಾ ಕ್ರಮಗಳನ್ನುವೈಜ್ಞಾನಿಕ ಹಾಗೂ ವ್ಯವಸ್ಥಿತ ರೀತಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶಗಳ ಅನ್ವಯ ಮಾಡಬೇಕು. ಸಾರ್ವಜನಿಕರು ಬೀದಿ ನಾಯಿಗಳಿಗೆ ಯಾವುದೇ ರೀತಿಯಲ್ಲಿ ಆಹಾರವನ್ನು ನೀಡಬಾರದು ಮತ್ತು ಸುಪ್ರೀಂಕೋರ್ಟ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಪೋಮ್ ಸಿಂಗ್, ಡಿಎಚ್ಒ ಡಾ.ನಂದಿತಾ ಎಮ್.ಎನ್., ನಗರಾಭಿ ವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್, ತಹಸೀಲ್ದಾರ್ ಸುರೇಶ ವರ್ಮಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಪಶು ಸಂಗೋಪನೆ ಇಲಾಖೆಯ ವಿವಿಧ ತಾಲೂಕುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಮನೆಗೆ ತೆರಳಿ ಎಸ್‌ಐಆರ್ ಅಭಿಯಾನ: ಶಾಸಕ ಎಚ್. ಕೆ. ಸುರೇಶ್
ಮಾಸಾಶನ ಸ್ಥಗಿತ ಸರಿಯಲ್ಲ: ಮಾಡಾಳು ಮಲ್ಲಿಕಾರ್ಜುನ್