ಮುಂಡರಗಿ: ಕನ್ನಡಪ್ರಭ ವಿದ್ಯಾರ್ಥಿಗಳಿಗಾಗಿ ಯುವ ಆವೃತ್ತಿಯನ್ನು ಹೊರ ತಂದಿದ್ದು, ಮಕ್ಕಳು ಅದನ್ನು ಓದಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಪಂಡಿತ ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ಹಿರಿಯ ಸದಸ್ಯ ಈಶ್ವರಪ್ಪ ಹಂಚಿನಾಳ ಹೇಳಿದರು.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅಂಗೈಯಲ್ಲಿಯೇ ಆಕಾಶವನ್ನು ನೋಡಿ ಅಲ್ಲಿನ ವಿಸ್ಮಯ ತಿಳಿದುಕೊಳ್ಳುತ್ತೇವೆ. ಮಕ್ಕಳು ಈ ಆವೃತ್ತಿಯ ಸದುಪಯೋಗ ಪಡೆದುಕೊಂಡು ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಐಎಎಸ್, ಕೆಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆಗೇರುವಂತಾಗಬೇಕು ಎಂದರು.
ಶಾಲೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ, ಆಡಳಿತ ಮಂಡಳಿ ಸದಸ್ಯ ಕರಬಸಪ್ಪ ಹಂಚಿನಾಳ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕನ್ನಡಪ್ರಭ ಮಕ್ಕಳಿಗೆ ಪೂರಕವಾಗುವ ರೀತಿಯಲ್ಲಿ ಯುವ ಆವೃತ್ತಿ ಹೊರ ತರುತ್ತಿದ್ದು, ನಮ್ಮ ಮಕ್ಕಳು ಅದನ್ನು ಸಂಗ್ರಹಿಸಿಟ್ಟುಕೊಂಡು ಓದುತ್ತಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಈ ಆವೃತ್ತಿ ಸಹಕಾರಿಯಾಗಿದೆ ಎಂದರು.ಕನ್ನಡಪ್ರಭ ಜಿಲ್ಲಾ ವರದಿಗಾರ ಶಿವಕುಮಾರ ಕುಷ್ಟಗಿ ಮಾತನಾಡಿ, 50 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡಪ್ರಭ ಪತ್ರಿಕೆ ಮಕ್ಕಳಿಗಾಗಿ ಏನನ್ನಾದರೂ ನೀಡಬೇಕೆನ್ನುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ಯುವ ಆವೃತ್ತಿ ಹೊರತಂದಿದ್ದು, ರಾಜ್ಯಾದ್ಯಂತ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದು ಮಕ್ಕಳಿಗೆ ಹೆಚ್ಚು ಪೂರಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷ ತಯಾರಿ ಮಾಡುವವರಿಗೆ ಕೈಪಿಡಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಿತ್ಯ 100 ಪ್ರತಿಗಳನ್ನು ನೀಡುತ್ತಿರುವ ದಾನಿಗಳು ಹಾಗೂ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರನ್ನು ಕನ್ನಡಪ್ರಭ ವತಿಯಿಂದ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಕ್ಕಳಿಗೆ ಸಣ್ಣದೊಂದು ಸೇವೆ ಮಾಡಲು ಅವಕಾಶ ನೀಡಿದ ಕನ್ನಡಪ್ರಭಕ್ಕೆ ಹಾಗೂ ಶಾಲೆಯ ಆಡಳಿತ ಮಂಡಳಿಗೆ ಅಭಿನಂದಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಪಾಟೀಲ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪರಮೇಶ ನಾಯಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪುರ, ಕನ್ನಡಪ್ರಭ ಗದಗ ಜಿಲ್ಲಾ ಪ್ರಸಾರಾಂಗ ವಿಭಾಗದ ಪ್ರಸಾದ್, ತಾಲೂಕು ವರದಿಗಾರ ಶರಣು ಸೊಲಗಿ ಹಾಗೂ ಶಾಲಾ ಶಿಕ್ಷಕರ ಬಳಗ ಉಪಸ್ಥಿತರಿದ್ದರು. ಡಿ.ಎಚ್. ಇಮ್ರಾಪುರ ಸ್ವಾಗತಿಸಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.