ಗಜೇಂದ್ರಗಡ: ರಸ್ತೆ ಸಮಸ್ಯೆ ಹಾಗೂ ಮಳೆ ನೀರಿನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆಯಾಗದಂತೆ ಗ್ರಾಪಂ ಪಿಡಿಒಗಳು ತಕ್ಷಣವೇ ಅಗತ್ಯ ಕೆಲಸ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ತಾಲೂಕಿನಲ್ಲಿ ಮಳೆಯಿಂದ ಶಾಲೆ ಹಾಗೂ ಆವರಣಗಳಲ್ಲಿ ನುಗ್ಗಿದ ಮಳೆ ನೀರಿನಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ರಾಜೂರು, ನೆಲ್ಲೂರು ಗ್ರಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಿ ಮಾತನಾಡಿದರು.ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ತಾಲೂಕಾಡಳಿತ ಪ್ರಥಮ ಆದ್ಯತೆ ನೀಡಿದೆ. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿ ಸಮೂಹದ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲ ಅಗತ್ಯ ಸಹಕಾರ ಹಾಗೂ ನೆರವು ನೀಡಲು ಆಡಳಿತ ಬದ್ಧವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ರಾಜೂರ ಹಾಗೂ ಮುಶಿಗೇರಿ ಗ್ರಾಪಂ ವ್ಯಾಪ್ತಿಯ ನೆಲ್ಲೂರ ಗ್ರಾಮದ ಶಾಲಾವರಣವು ಜಲಾವೃತವಾಗಿದ್ದ ಪರಿಣಾಮ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆದ ವರದಿ ಗಮನಿಸಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉದ್ಭವ ಆಗಬಾರದು. ಹೀಗಾಗಿ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಾಯ ಸಹಕಾರ ಗಜೇಂದ್ರಗಡ ತಾಪಂ ಹಾಗೂ ತಹಸೀಲ್ದಾರ್ ಕಾರ್ಯಾಲಯದಿಂದ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ರಾಜೂರು ಗ್ರಾಮದ ಶಾಲೆಯ ಮುಂಭಾಗದಲ್ಲಿ ಚರಂಡಿ ಬಂದ್ ಆಗಿದೆ. ಹೀಗಾಗಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜತೆಗೆ ಪೈಪ್ ಅಳವಡಿಸಿದರೆ ನೀರು ನಿಲ್ಲುವುದಿಲ್ಲ. ಹೀಗಾಗಿ ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಹಾಗೂ ನೆಲ್ಲೂರು ಗ್ರಾಮದ ಶಾಲಾವರಣದಲ್ಲಿ ನಿಲ್ಲುವ ನೀರಿಗೆ ಕಡಿವಾಣ ಹಾಕಲು ತಡೆಗೋಡಿ ನಿರ್ಮಾಣದ ಅವಶ್ಯಕತೆಯಿದೆ. ಹೀಗಾಗಿ ತಕ್ಷಣವೇ ಜೆಸಿಬಿ ಮೂಲಕ ನೀರು ಹರಿದು ಹೋಗಲು ತಾತ್ಕಾಲಿಕ ಕೆಲಸ ನಡೆಸಲು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಪಿಡಿಒಗಳಿಗೆ ಸೂಚಿಸಿದರು. ಈ ವೇಳೆ ತಾಪಂ ಇಒ ಬಸವರಾಜ ಬಡಿಗೇರ ತಹಸೀಲ್ದಾರ್‌ಗೆ ಸಾಥ್ ನೀಡಿದ್ದರು.ಗ್ರಾಪಂ ಸದಸ್ಯ ವೀರಪ್ಪ ಅಂಗಡಿ, ಶಾಲಾ ಮುಖ್ಯೋಪಾಧ್ಯಾಯ ಎಸ್.ಕೆ.ಕವಡಿಮಟ್ಟಿ, ವಿ.ಎಸ್.ಹೊಸಳ್ಳಿ, ಎಂ.ಪಿ.ಪಾಟೀಲ, ಶರಣಯ್ಯ ಮಾಸಗಟ್ಟಿ, ಅಮರಯ್ಯ ಭೂಸನೂರಮಠ, ರವಿ ಬೆಲ್ಲಪ್ಪನವರ, ಲೋಹಿತ್ ರಾಠೋಡ, ಬಾಲಪ್ಪ ಲಮಾಣಿ, ಶಿವಾನಂದಯ್ಯ ಬೆನಹಾಳ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.ಗ್ರಾಮಸ್ಥರ ಆಗ್ರಹ:
ತಾಲೂಕಿನ ಮುಶಿಗೇರಿ ಗ್ರಾಪಂ ವ್ಯಾಪ್ತಿಯ ನೆಲ್ಲೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಜಾಗದಲ್ಲಿ ಕೆಲ ಭಾಗವು ಅರಣ್ಯ ಇಲಾಖೆಗೆ ಸರಹದ್ದಿಗೆ ಬರುತ್ತಿರುವ ಪರಿಣಾಮ ಶಾಲಾವರಣದಲ್ಲಿ ಕಾಮಗಾರಿ ನಡೆಸಲು ಮುಂದಾದಾಗ ಅರಣ್ಯ ಇಲಾಖೆಯಿಂದ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಶಾಲಾ ಆವರಣಕ್ಕೆ ನುಗ್ಗುವ ಮಳೆ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನ ನೀಡಬೇಕು ಎಂಬ ಆಗ್ರಹಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.