ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ತಲಕಾವೇರಿಕನ್ನಡ ನಾಡಿನ ಜೀವ ನದಿ, ಕೊಡವರ ಕುಲ ದೇವತೆ ಕಾವೇರಿ ತವರು ತಲಕಾವೇರಿಯಲ್ಲಿ ಗುರುವಾರ ಮುಂಜಾನೆ ನಿಗದಿಗಿಂತ ಒಂದು ನಿಮಿಷ ತಡವಾಗಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿದಳು.
ತಲಕಾವೇರಿಯ ಪವಿತ್ರ ಬ್ರಹ್ಮ ತೀರ್ಥ ಕುಂಡಿಕೆಯಲ್ಲಿ ತೀರ್ಥೋದ್ಭವ ಆಗುತ್ತಿದ್ದಂತೆ ಸಾವಿರಾರು ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ‘ಜೈ ಜೈ ಮಾತಾ... ಕಾವೇರಿ ಮಾತಾ...’ ಎಂದು ಭಕ್ತರು ಕಾವೇರಿಗೆ ಜೈಕಾರ ಹಾಕಿದರು. ತೀರ್ಥೋದ್ಭವ ಸಮಯ ಸಮೀಪಿಸುತ್ತಿದ್ದಂತೆ ಪೊಲೀಸ್ ಬ್ಯಾರಿಕೇಡ್ ಬೇಧಿಸಿ ಬಿಂದಿಗೆ ಹಿಡಿದುಕೊಂಡಿದ್ದ ಭಕ್ತರು ಒಬ್ಬೊಬ್ಬರಾಗಿ ಕೊಳಕ್ಕೆ ಧುಮುಕಲು ಆರಂಭಿಸಿದರು.ಗುರುವಾರ ಬೆಳಗ್ಗೆ 7 ಗಂಟೆ 41 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದ ಪುಣ್ಯಕಾಲದಲ್ಲಿ ಶ್ರೀ ಮೂಲ ಕಾವೇರಿ ತೀರ್ಥೋದ್ಭವ ಸಂಭವಿಸಿತು. ಅರ್ಚಕರು ಭಕ್ತರಿಗೆ ತೀರ್ಥ ಪ್ರೋಕ್ಷಣೆ ಮಾಡಿದರು.
ತೀರ್ಥೋದ್ಭವದ ಪೂಜಾ ವಿಧಿವಿಧಾನಗಳನ್ನು ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಗುರುರಾಜ್, ರವಿರಾಜ್, ವಿಠಲ ಆಚಾರ್, ಸುಧೀರ್ ಆಚಾರ್ ಮತ್ತಿತರರು ನೆರವೇರಿಸಿದರು.ತೀರ್ಥವನ್ನು ಬೆಳ್ಳಿಯ ಬಿಂದಿಗೆಯಲ್ಲಿ ತುಂಬಿಸಿ ಭಾಗಮಂಡಲದ ಶ್ರೀ ಭಗಂಡೇಶ್ವರನಿಗೆ ಅರ್ಪಿಸಲಾಯಿತು.
ಪವಿತ್ರ ಸ್ನಾನ, ಪಿಂಡ ಪ್ರದಾನ:ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ಅಲ್ಲದೆ ತಮ್ಮ ಹಿರಿಯರಿಗೆ ಪಿಂಡ ಪ್ರದಾನ ಮಾಡಿದರು.
ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲದಿಂದ ತಲಕಾವೇರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿತ್ತು. ಭಾಗಮಂಡಲದಲ್ಲಿ ಗಜಾನನ ಯುವಕ ಸಂಘದಿಂದ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಭಾಗಮಂಡಲದ ದೇವಾಲಯದ ಆವರಣದ ಮುಂಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಮಾಹಿತಿ ಮತ್ತು ವಸ್ತು ಪ್ರದರ್ಶನ ತೆರೆಯಲಾಗಿತ್ತು. ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತಿತರ ಮಾಹಿತಿಯನ್ನು ಸಿಬ್ಬಂದಿ ನೀಡಿದರು.ತೀರ್ಥೋದ್ಭವದಲ್ಲಿ ಈ ಬಾರಿ ಕೇರಳ ರಾಜ್ಯದ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕಸಾಪ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ನೇತೃತ್ವದಲ್ಲಿ ‘ಭಕ್ತಿಗೀತೆ ಗಾಯನ’ ಕಾರ್ಯಕ್ರಮ ನಡೆಯಿತು. ಎಂ.ಬಿ.ದೇವಯ್ಯ ನೇತೃತ್ವದ ತಂಡದವರು ದುಡಿ ನುಡಿಸಿದರು.ತೀರ್ಥೋದ್ಭವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್‌ಪಿ ಮಹೇಶ್ ಕುಮಾರ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯದ ಇಒ ಎನ್.ಜಿ.ಚಂದ್ರಶೇಖರ್, ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷರಾದ ಕಾಳನ ರವಿ, ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮತ್ತಿತರರು ಇದ್ದರು.
ತೀರ್ಥ ವಿತರಣೆ:ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಿಂದ ಸಾವಿರಾರು ಲೀಟರ್ ತೀರ್ಥ ತೆಗೆದರೂ ಕೂಡ ಬ್ರಹ್ಮ ಕುಂಡಿಕೆ ಬತ್ತಲಿಲ್ಲ. ಸುಮಾರು 30 ಕ್ಕೂ ಅಧಿಕ ವಾಹನಗಳಲ್ಲಿ ಸಿಂಟೆಕ್ಸ್, ಬ್ಯಾರಲ್ ಹಾಗೂ ಕ್ಯಾನುಗಳಲ್ಲಿ ತೀರ್ಥ ಸಂಗ್ರಹಿಸಲಾಯಿತು. ತೀರ್ಥ ವಿತರಣಾ ವಾಹನಗಳು ಅಲಂಕೃತಗೊಂಡು ಗಮನ ಸೆಳೆದವು.
ಪಾದಯಾತ್ರೆ:ತೀರ್ಥೋದ್ಭವ ಅಂಗವಾಗಿ ವಿವಿಧ ಕೊಡವ ಸಮಾಜಗಳ ಸಾವಿರಾರು ಮಂದಿಯಿಂದ ಭಾಗಮಂಡಲದಿಂದ ತಲಕಾವೇರಿ ವರೆಗೆ ಪಾದಯಾತ್ರೆ ನಡೆಯಿತು. ಗುರುವಾರ ಮುಂಜಾನೆ 3 ಗಂಟೆಯಿಂದಲೇ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಪುರುಷರು ದುಡಿ ಹಿಡಿದುಕೊಂಡು ಪಾದಯಾತ್ರೆ ನಡೆಸಿದರು. ಯುವತಿಯರು ಹಾಗೂ ಮಹಿಳೆಯರು ದೀಪ ಹಿಡಿದು ಸಾಗಿದರು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕೂಡ ಭಾಗವಹಿಸಿದ್ದರು.
ಭಿಕ್ಷಾಟನೆಯಲ್ಲಿ ಪುಟಾಣಿ ಮಕ್ಕಳು!:ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಭಿಕ್ಷಾಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ತೊಡಗಿದ್ದು, ಇದರಲ್ಲಿ ಬಹುತೇಕರು ಪುಟಾಣಿಗಳು ಕಂಡುಬಂದರು. ಮಕ್ಕಳು ಕೂಡ ಭಿಕ್ಷೆ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹರಕೆ ಹೊತ್ತುಕೊಂಡಿದ್ದ ಭಕ್ತರು ನಾಣ್ಯ ಹಾಗೂ ಅಕ್ಕಿಯನ್ನು ಭಿಕ್ಷೆಯಾಗಿ ನೀಡುತ್ತಿದ್ದುದು ಕಂಡುಬಂತು. ಮುಂಜಾನೆ ಟ್ರಾಫಿಕ್ ಜಾಮ್: ಭಾಗಮಂಡಲ - ತಲಕಾವೇರಿ ರಸ್ತೆಯಲ್ಲಿ ಮುಂಜಾನೆಯೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಒಂದು ಕಡೆಯಲ್ಲಿ ಭಕ್ತರು ಪಾದಯಾತ್ರೆ ಕೂಡ ನಡೆಸಿದ್ದರಿಂದ ವಾಹನಗಳು ಏಕ ಕಾಲದಲ್ಲಿ ಸಂಚರಿಸಲು ಸಾಧ್ಯವಾಗಿಲ್ಲ. ಬೆಳಗ್ಗೆ 4.45ಕ್ಕೆ ಭಾಗಮಂಡಲದಿಂದ ಹೊರಟ ವಾಹನಗಳು ತಲಕಾವೇರಿ ತಲುಪುವಾಗ 6.15 ಗಂಟೆಯಾಗಿತ್ತು. ರಸ್ತೆಯುದ್ದಕ್ಕೂ ವಾಹನಗಳು ನಿಧಾನವಾಗಿ ಚಲಿಸಿದವು. ಇದರಿಂದ ವಾಹನದಲ್ಲಿ ಸಂಚರಿಸಬೇಕಾದ ಪೊಲೀಸರು ಕೂಡ ಪಾದಯಾತ್ರೆ ನಡೆಸಿದ ದೃಶ್ಯ ಕಂಡುಬಂತು. ........................ಒಂದು ತಿಂಗಳು ಅನ್ನದಾನ ತಲಕಾವೇರಿಯಲ್ಲಿ ಕೊಡಗು ಏಕೀಕರಣ ರಂಗದಿಂದ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. 30ನೇ ವರ್ಷದ ಅನ್ನದಾನ ಕಾರ್ಯಕ್ರಮ ಇದಾಗಿದ್ದು, ಅ.17ರಂದ ನ.17ರ ವರೆಗೆ ಸುಮಾರು ಒಂದು ತಿಂಗಳು ಅನ್ನದಾನ ಇರಲಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಅನ್ನ ಪ್ರಸಾದ ಸ್ವೀಕರಿಸಬಹುದಾಗಿದೆ. ತೀರ್ಥೋದ್ಭವದ ದಿನ ಬೆಳಗ್ಗೆ ಇಡ್ಲಿ, ವಡೆ, ಸಾಂಬಾರ್, ಚಟ್ನಿ, ಉಪ್ಪಿಟ್ಟು ಹಾಗೂ ಕೇಸರಿ ಬಾತ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಅನ್ನ, ಸಾಂಬಾರ್, ಪಾಯಸ ಇತ್ತು. ಚೆಟ್ಟಿನಾಡು ವಾಲ್ನೂರು ಎಸ್ಟೇಟ್‌ನ ಅಣ್ಣಾಮಲೈ ಚೆಟ್ಟಿಯಾರ್ ಅವರಿಂದ ಭಕ್ತಾದಿಗಳಿಗೆ ತೀರ್ಥೋದ್ಭವದ ದಿನ ಅನ್ನಸಂತರ್ಪಣೆ ನೆರವೇರಿತು.