ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ದ.ಕ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು.ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಶಿಸ್ತು, ನೈತಿಕತೆ, ಸಾಮಾಜಿಕ ಜವಾಬ್ದಾರಿಯನ್ನು ಶಿಕ್ಷಣ ನೀಡುತ್ತದೆ. ಸರಿ- ತಪ್ಪುಗಳನ್ನು ತಿಳಿಸುತ್ತದೆ. ಗೌರವ, ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣದಿಂದ ಸಾಧ್ಯ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರು ವಿಶ್ವಾಸಾರ್ಹತೆ, ಸಮಾಜದ ಅಭಿವೃದ್ಧಿಯ ಬದ್ಧತೆಯನ್ನು ಇಟ್ಟುಕೊಂಡು ಬೆಳೆಯಬೇಕು. ತಮ್ಮ ಗೌರವಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು ಎಂದರು.10 ಮಂದಿಗೆ ಪ್ರತಿಭಾ ಪುರಸ್ಕಾರ: ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಪತ್ರಕರ್ತರ ಮಕ್ಕಳಾದ ತೇಜಸ್ ಕಿಣಿ, ದೀಪ್ತಿ ಭಟ್, ಅವನಿ ಪಿ. ಬಂಗ, ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಬಿ.ಆರ್.ಶ್ರೀಹರಿ, ತಂಝಿಲ್ ರಹಮಾನ್, ಮನೀಶ್ ಎಸ್. ಶೆಟ್ಟಿ, ಮಹಮ್ಮದ್ ಶಫೀಕ್, ಮಾಧವ ಕಾಮತ್, ದೇವಾಂಶು, ಸುದನ್ವ ಕೆ.ಬಿ ಅವರನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
64 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ 82ರ ಹರೆಯದ ರಮೇಶ್, ವಿನೂತನ ರೀತಿಯಲ್ಲಿ ಮತದಾನ ಹಾಗೂ ಡೆಂಘೀ ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ, ಶಿರೂರು ಗುಡ್ಡ ಕುಸಿತ ಸಂದರ್ಭ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಪತ್ರಕರ್ತರಾದ ಆರೀಫ್ ಯು.ಆರ್. ಕಲ್ಕಟ್ಟ, ಶಶಿ ಬೆಳ್ಳಾಯರು, ಗಿರೀಶ್ ಮಳಲಿ, ಮೋಹನ್ ಕುತ್ತಾರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಹಿರಿಯ ಪತ್ರಕರ್ತ ಕೆ. ಆನಂದ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಇದ್ದರು. ಹರೀಶ್ ಮೋಟುಕಾನ ನಿರೂಪಿಸಿದರು.