ಕನ್ನಡಪ್ರಭ ವಾರ್ತೆ ಕುಶಾಲನಗರ
ಮುಳ್ಳುಸೋಗೆ ತಪೋವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಸಂತ ಸೆಬಾಸ್ಟಿಯನ್ ದೇವಾಲಯ ಧರ್ಮಗುರು ಫಾ.ಮಾರ್ಟಿನ್ ಆಶೀರ್ವಚನ ನೀಡಿದರು. ಶಿಕ್ಷಣ ಎಂದಿಗೂ ಅಳಿಸಲಾಗದಂತಹ ಶಕ್ತಿ. ಮಕ್ಕಳನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಸನ್ಮಾನ ಸ್ವೀಕರಿಸಿದ ಮಕ್ಕಳು ಭವಿಷ್ಯದಲ್ಲಿ ಇತರರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗ ಬೇಕಾಗಿದೆ ಎಂದು ಅವರು ಕರೆ ನೀಡಿದರು.
ತಪೋವನದ ಫಾ.ವಿಲ್ಫ್ರೆಡ್ ಫ್ರಾಂಕ್ ಮಾತನಾಡಿ, ಪ್ರತಿಯೊಬ್ಬರು ಅಗತ್ಯ ಉಳ್ಳವರಿಗೆ ಹಾಗೂ ದುರ್ಬಲರಿಗೆ ಸಹಾಯ ಹಸ್ತ ಚಾಚಬೇಕಿದೆ. ಜಗತ್ತಿನಲ್ಲಿ ಅವಶ್ಯಕತೆಗಳು ಹೆಚ್ಚಾಗಿರುವ ಕಾರಣ ಕೈಚಾಚಿ ಮನಸ್ಸು ಪೂರ್ತಿಯಾಗಿ ನೆರವು ನೀಡಬೇಕಿದೆ ಎಂದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಇಂದಿನ ಕಾಲದಲ್ಲಿ ಇತರರ ಬಗ್ಗೆ ಕಾಳಜಿ ವಹಿಸುವ ಮನೋಭಾವ ಕ್ಷೀಣಿಸುತ್ತಿದೆ. ನೆರೆಹೊರೆಯವರಿಗೆ ನೆರವಾಗುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಇತರ ಧರ್ಮ, ಸಮುದಾಯಗಳನ್ನು ಕೀಳಾಗಿ ಕಾಣದೆ ತಮ್ಮ ಸಮುದಾಯದ ಉನ್ನತಿಗೆ, ಪ್ರತಿಭಾವಂತರು, ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಮುದಾಯದ 16 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಸಾಧಕರು, ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ಆರ್ಯ ಅವರು ನಡೆಸಿಕೊಟ್ಟ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.