ಒತ್ತಡದ ಕರ್ತವ್ಯಕ್ಕೆ ಬ್ರೇಕ್ ಹಾಕಿ ತಮ್ಮ ಪ್ರತಿಭೆ ಹೊರಹಾಕಿದ ಆರಕ್ಷಕರು!
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಪ್ರತಿಭೋತ್ಸವ ಕಾರ್ಯಕ್ರಮ ಕಲಾ ಸಂಚಿಕೆ -2 ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಇತ್ತೀಚೆಗೆ ನಡೆಯಿತು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಂ.ಬಿ ಕಾವೇರಪ್ಪ ಹಾಗೂ ವಿರಾಜಪೇಟೆ ಸರ್ವೋದಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಸಿಂಡಿಕೇಟ್ ಸದಸ್ಯರಾದ ಡಾ.ಎಂ. ವಾಣಿ ಕಾರ್ಯಕ್ರಮ ಉದ್ಘಾಟಿದರು.ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾವೇರಪ್ಪ ಮಾತನಾಡಿ, ಪೊಲೀಸ್ ಇಲಾಖೆಯ ಒತ್ತಡ ಕರ್ತವ್ಯದಿಂದ ಹೊರ ಬಂದು ತಮ್ಮ ಪ್ರತಿಭೆಗಳನ್ನು ಹೊರ ತರಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದ ಅವರು, ಪೊಲೀಸರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಧಿಕಾರಿಗಳ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊರ್ವ ಅತಿಥಿ ಡಾ. ವಾಣಿ ಮಾತನಾಡಿ, ಪೊಲೀಸ್ ಬಗ್ಗೆ ಹಿಂದಿನ ಕಾಲದಲ್ಲಿದ್ದ ಭಯ, ಗೌರವದ ಬಗ್ಗೆ ತಮ್ಮ ಅನುಭವಗಳನ್ನು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.ನಂತರ ನಡೆದ ಸಂಗೀತ ಸಂಜೆಯಲ್ಲಿ ಮಡಿಕೇರಿ ಗ್ರಾಮಾಂತರ ನಿರೀಕ್ಷಕ ಚಂದ್ರಶೇಖರ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಕುಶಾಲನಗರ ಠಾಣಾಧಿಕಾರಿ ಗೀತಾ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ 43 ಅಧಿಕಾರಿ ಮತ್ತು ಸಿಬ್ಬಂದಿ 1980ರ ದಶಕದ ಚಿತ್ರಗೀತೆಗಳನ್ನು ಕರೋಕೆ ಮೂಲಕ ಹಾಡಿ ತಮ್ಮ ಪ್ರತಿಭೆಗಳನ್ನು ಹೊರ ಹಾಕಿದರು.
ಜೊತೆಗೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟ ಅಧಿಕಾರಿ, ಸಿಬ್ಬಂದಿ ವೇದಿಕೆಯಲ್ಲಿ ಮಿಂಚಿದರು. ಸಿನಿಮಾ ಹಾಡುಗಳ ಜೊತೆಯಲ್ಲಿ ಕಂಟ್ರೋಲ್ ರೂಮಿನ ವಿಜಯ್, ಡಿಎಆರ್‌ನ ತೀರ್ಥನಂದ ಅವರ ಕವನ ವಾಚನ, ಮಡಿಕೇರಿ ಗ್ರಾಮಾಂತರ ಠಾಣೆಯ ಬಸವರಾಜು ಅವರ ಏಕ ಪಾತ್ರ ಅಭಿನಯವೂ ಕಾರ್ಯಕ್ರಮಕ್ಕೆ ಕಳೆ ತಂದಿತು.ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಪಿ.ಎ. ಸೂರಜ್, ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಜಿಲ್ಲಾ ಗುಪ್ತ ದಳದ ನಿರೀಕ್ಷಕ ಮೇದಪ್ಪ ಐಪಿ, ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ಗ್ರಾಮಾಂತರ ನಿರೀಕ್ಷಕ ಚಂದ್ರಶೇಖರ, ಕುಟ್ಟ ವೃತ್ತ ನಿರೀಕ್ಷಕ ಶಿವರುದ್ರ, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿನ ನಿರೀಕ್ಷಕ ಅನಂತ್, ಬೆರಳುಚು ವಿಭಾಗದ ನಿರೀಕ್ಷಕ ರಾಮಕೃಷ್ಣ, ಉಪನಿರೀಕ್ಷಕ ಧನಂಜಯ, ಪ್ರಮೋದ್, ಮಂಜುನಾಥ್, ನವೀನ್, ಲತಾ, ವಾಣಿಶ್ರೀ, ಗೀತಾ ಸೇರಿದಂತೆ ಹಲವು ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು.
ಕೊನೆಯಲ್ಲಿ ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ವೇದಿಕೆ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ, ಹಾಡುಗಾರರಿಗೆ ನೆನಪಿನ ಕಾಣಿಕೆ ವಿತರಣೆಯೊಂದಿಗೆ ಮಡಿಕೇರಿ ಟ್ರಾಫಿಕ್ ಠಾಣೆಯ ಎಎಸ್‌ಐ ನಂದ ಅವರನ್ನು ಸನ್ಮಾನಿಸಿದರು.ನಾಪೋಕ್ಲು ಠಾಣೆಯ ಪಿಎಸ್‌ಐ ಮಂಜುನಾಥ್ ಸ್ವಾಗತಿಸಿದರು. ವೈರ್‌ಲೆಸ್ ಪಿಎಸ್‌ಐ ಧನಂಜಯ್ ವಂದಿಸಿದರು. ಸಿಬ್ಬಂದಿ ಮಲ್ಲಪ್ಪ, ಕಾವೇರಮ್ಮ ಕಾರ್ಯಕ್ರಮ ನಿರೂಪಿಸಿದರು.