ಕನ್ನಡಪ್ರಭ ವಾರ್ತೆ ತಾಳಿಕೋಟೆ
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ರೀತಿ ಮಾತನಾಡಿದ ಕೇಂದ್ರ ಸಚಿವ ಅಮಿತ ಶಾ ಅವರ ಹೇಳಿಕೆ ಖಂಡಿಸಿ ಮಂಗಳವಾರ ವಿವಿಧ ದಲಿತಪರ ಸಂಘಟನೆಗಳು ತಾಳಿಕೋಟೆ ಪಟ್ಟಣ ಬಂದ್ ಮಾಡಿ ನೀಡಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಅಮಿತ ಶಾ ಅವರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹನ ಮಾಡಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.ಬೆಳಗ್ಗೆಯಿಂದಲೇ ರಸ್ತೆಗಿಳಿದ ಪ್ರತಿಭಟನಾಕಾರರು ಅಂಗಡಿಕಾರರ ಬೆಂಬಲ ಕೋರಿದರು. ಈ ಹಿನ್ನಲೆಯಲ್ಲಿ ಅಡತ್, ಕಪ್ಪಡ, ಕಿರಾಣಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬೆಂಬಲ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಸೇರಿದಂತೆ ಪಟ್ಟಣದಲ್ಲಿ ಸಾರಿಗೆ ಸಂಚಾರವೂ ತೀರಾ ವಿರಳವಾಗಿತ್ತು. ಅಲ್ಲದೇ ಪಟ್ಟಣದಲ್ಲಿ ಆಸ್ಪತ್ರೆ, ಔಷಧ ಅಂಗಡಿಗಳು, ಸರ್ಕಾರಿ ಕಚೇರಿಗಳ ಸೇವೆ ಎಂದಿನಂತೆ ಕಾರ್ಯನಿರ್ವಹಿಸಿದವು. ಬಂದ್ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳು ರಜೆ ನೀಡಲಾಗಿತ್ತು.
ಪ್ರತಿಭಟನಾಕಾರರು ಡಾ.ಅಂಬೇಡ್ಕರ್ ಭವನದಿಂದ ಬಸವೇಶ್ವರರ ವೃತ್ತದವರೆಗೆ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸಿ ಅಣಕು ಶವವನ್ನು ದಹನ ಮಾಡಿದರು.ಈ ವೇಳೆ ಮಾತನಾಡಿದ ದಲಿತಪರ ಸಂಘಟನೆಯ ಉಪಾಧ್ಯಕ್ಷ ಬಸವರಾಜ ಕಟ್ಟಿಮನಿ, ಈ ದೇಶವನ್ನು ಮುನ್ನಡೆಸುವ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ಅಧೀವೇಶನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಡಿಎಸ್‌ಎಸ್ ಸಂಘಟನಾ ಸಂಚಾಲಕ ಗುರುರಾಜ ಗುಡಿಮನಿ, ಸಿದ್ದು ಭಾರಿಗಿಡದ, ಡಿಎಸ್‌ಎಸ್ ಬೆಳಗಾವಿ ವಿಭಾಗದ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಮಾತನಾಡಿ, ಸಚಿವರಾಗಿ ಅಮಿತ ಶಾ ಅವರ ರಾಜೀನಾಮೆ ಪಡೆಯುವ ಮೂಲಕ ಪ್ರಧಾನಿ ಮೋದಿ ಘನತೆಯನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ದಾರಿ ತಪ್ಪುವುದರಲ್ಲಿ ಸಂದೇಹವಿಲ್ಲ. ಮುಂದೆ ಇದರ ಪರಿಣಾಮ ಗಂಭೀರವಾಗಲಿದೆ ಎಂದರು. ಬಳಿಕ, ದಲಿತಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಕೀರ್ತಿ ಚಾಲಕ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನಾ ನೇತೃತ್ವವನ್ನು ದಲಿತಪರ ಸಂಘಟನೆಗಳ ಗೌರವಾಧ್ಯಕ್ಷ ಎಸ್.ಬಿ.ಕಟ್ಟಿಮನಿ, ಅಧ್ಯಕ್ಷ ಮುತ್ತಪ್ಪಣ್ಣ ಚಮಲಾಪೂರ, ಪ್ರಧಾನ ಕಾರ್ಯದರ್ಶಿ ದೇವೆಂದ್ರ ಹಾದಿಮನಿ, ಕಾರ್ಯದರ್ಶಿ ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ, ಶಾಂತಪ್ಪ ತಮದಡ್ಡಿ, ಶಂಕ್ರಪ್ಪ ಕಟ್ಟಿಮನಿ, ಸಿದ್ರಾಮ ಚಮಲಾಪೂರ, ಹಣಮಂತ ಕೊಡಗಾನೂರ, ಪರಶುರಾಮ ಕಟ್ಟಿಮನಿ, ಮಹಾಂತೇಶ ಕಟ್ಟಿಮನಿ, ಶಾಂತಪ್ಪ ಕೊಡಗಾನೂರ, ಕಾಶಿನಾಥ ಕಾರಗನೂರ, ಕಾರ್ತಿಕ ಕಟ್ಟಿಮನಿ, ವಿಶ್ವನಾಥ ಚಲವಾದಿ, ರವಿ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಬಸವರಾಜ ಬಳಗಾನೂರ, ಶ್ರೀನಿವಾಸ ಕುಲಕರ್ಣಿ, ಬಸವರಾಜ ಬಡಿಗೇರ, ಬಾಬು ಮಿಣಜಗಿ, ಗೌತಮ ಪತ್ತೇಪೂರ, ಶಂಕರ ಪಡಸಾಲಿ, ಮರೆಪ್ಪ ತಾರನಾಳ, ಬಸವರಾಜ ಬೀಸನಾಳ ಮೊದಲಾದವರು ವಹಿಸಿದ್ದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ, ಅಪರಾಧ ವಿಭಾಗ ಪಿಎಸ್ಐ ಆರ್.ಎಸ್.ಭಂಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.