ಕನ್ನಡಪ್ರಭ ವಾರ್ತೆ ಕಾರ್ಕಳ
ಮಾತಾಡದೆ ಮರೆತ ಭಾಷೆ ನಿಶ್ಶಬ್ಧವಾಗಿ ನಾಶವಾಗುತ್ತದೆ. ಶಕ್ತಿಶಾಲಿಯಾದ ಕುಂದಾಪ್ರ ಕನ್ನಡ ಉಳಿಸಲು ಮಕ್ಕಳೇನು ಮಾತಾಡುವಂತೆ ಮಾಡುವ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ, ಕುಂದಗನ್ನಡದ ಪ್ರಬಲ ಪ್ರವರ್ತಕ ಐರೋಡಿ ಶಂಕರನಾರಾಯಣ ಹೆಬ್ಬಾರ್ ಕರೆ ನೀಡಿದ್ದಾರೆ.ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹೊಟೇಲ್ ಪ್ರಕಾಶ ಸಂಭ್ರಮ ಸಭಾಂಗಣದಲ್ಲಿ ಗುರುವಾರ ನಡೆದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಜೋರು, ರಾಪು, ಜಾಪು, ತನಿ, ಒಯ್ಲು, ಹೊಯ್ಲು, ರಭಸ ಇವುಗಳು ಈ ಭಾಷೆಯ ಉತ್ಸಾಹದ ಕಿರಣಗಳು. ಕುಂದಗನ್ನಡವೂ ಇತರ ಪ್ರಾದೇಶಿಕ ಆಡು ಕನ್ನಡದಂತೆಯೇ ಶ್ರೇಷ್ಠವಾದ ಭಾಷೆ. ಆದರೆ ಕುಂದಗನ್ನಡವೇ ಶ್ರೇಷ್ಠ ಎಂಬ ಅಂಧ ಅಭಿಮಾನ ನಮ್ಮದಲ್ಲ. ಈ ಭಾಷೆಯ ರಸವನ್ನು ಬದುಕಿನಲ್ಲಿ ಸೇರಿಸಿಕೊಂಡರೆ ಅದು ನಿಜವಾದ ಉಳಿವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಜ್ಞಾನಸುಧಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಸುಧಾಕರ ಶೆಟ್ಡಿ ಅವರು, ಕಾರ್ಕಳದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರುವುದು ಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದು, ಇತರರಿಗೂ ಪ್ರೇರಣೆಯಾಗಿದೆ ಎಂದರು.ಉದ್ಯಮಿ ರಾಮಕೃಷ್ಣ ಆಚಾರ್, ಆಡುಭಾಷೆ ನಮ್ಮ ನೈಜ ಭಾವನೆಗಳಿಗೆ ನಂಟು. ಅದು ಬದುಕನ್ನು ಸಮೃದ್ಧಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದಾಗಿ ತಿಳಿಸಿದರು.ನಿತ್ಯಾನಂದ ಪೈ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ನೀಡಿದರು.ಗುಣಪಾಲ ಕಡಂಬ, ನವೀನಚಂದ್ರ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಶುಭಾಶಯ ತಿಳಿಸಿದರು. ಐರೋಡಿ ಹೆಬ್ಬಾರ್ ಅವರ ಕುಂದಗನ್ನಡ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು.
ಅಷಾಡಿ ತಿಂಗಳ ಮರಗೆಸದ ಪತ್ರೊಡೆ, ಅತ್ತಾಸು, ಹಲಸಿನ ಕಡಬ ಸೇರಿದಂತೆ ಹಲವಾರು ಸವಿಗಳ ತಿನಿಸುಗಳು ಗಮನ ಸೆಳೆದವು.ಧಾರಣಿ ಉಪಾಧ್ಯ ಪ್ರಾರ್ಥಿಸಿದರು. ಗೀತಾಚಂದ್ರ ನಿರೂಪಿಸಿದರು. ಪ್ರಕಾಶ್ ನಾಯ್ಕ ವಂದಿಸಿದರು.ನರಸಿಂಹ ಮೂರ್ತಿ, ಶಿವ ಸುಬ್ರಹ್ಮಣ್ಯ ಭಟ್, ಗಣೇಶ್ ಜಾಲ್ಸೂರು ಸಹಕರಿಸಿದರು.