ಬಡ ಕುಟುಂಬಗಳಿಗೆ ನಿವೇಶನ ನೀಡುವಲ್ಲಿ ತಾಲೂಕು ಆಡಳಿತ ವಿಫಲ

KannadaprabhaNewsNetwork |  
Published : Jan 01, 2025, 12:01 AM IST
ನೂರಾರು ಕುಟುಂಬಗಳಿಗೆ ನಿವೇಶನ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ | Kannada Prabha

ಸಾರಾಂಶ

ಭೂಮಿ, ವಸತಿ ವಿಚಾರವಾಗಿ ನೊಂದ ಮನಸ್ಸುಗಳ ಸಮಸ್ಯೆಗಳನ್ನು ಆಲಿಸಿ ಭೂಮಿ, ವಸತಿ ಹಕ್ಕು ಹೋರಾಟ ಸಮಿತಿಯಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ಎಸಿ, ತಹಸೀಲ್ದಾರ್‌ಗೆ ಮನವಿ ಮಾಡಿಕೊಂಡಿದ್ದೆವು. ಮಧುಗಿರಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯವಾಗಿ ಅಧಿಕಾರಿಗಳು ಕೈಗೊಂಡಿರುವ ನಿರ್ಣಯದ ಬಗ್ಗೆ ತಿಳಿಸುವಂತೆ ಈ ಹೋರಾಟವನ್ನು ಕೈಗೊಂಡಿದ್ದೇವೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ನೂರಾರು ಬಡ ಕುಟುಂಬಗಳು ನಿವೇಶನ ಇಲ್ಲದೆ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದು ತಾಲೂಕು ಆಡಳಿತ ಅವರಿಗೆ ನಿವೇಶನ ನೀಡುವಲ್ಲಿ ವಿಫಲವಾಗಿದೆ ಎಂದು ತುಮಕೂರು ಜಿಲ್ಲೆಯ ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

ಕೊರಟಗೆರೆ ಪಟ್ಟಣದ ತಾಲೂಕು ಕಚೇರಿ ಮುಂದೆ ತುಮಕೂರು ಜಿಲ್ಲೆಯ ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ತಾಲೂಕಿನ ಹುಲಿಕುಂಟೆ, ಹೊಳವನಹಳ್ಳಿ, ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಭೂಮಿ, ನಿವೇಶನ ವಂಚಿತಗೊಂಡಿರುವ ಕುಟುಂಬಗಳ ಪರಿಸ್ಥಿತಿ ಸಂಕಷ್ಟಕ್ಕೆ ತಲುಪಿದೆ. ಶೀಘ್ರದಲ್ಲೇ ಬೇಡಿಕೆ ಇಟ್ಟಿರುವ ಎಲ್ಲಾ ಸಮಸ್ಯೆಗಳನ್ನು ಮುಂದಿನ ೨ ತಿಂಗಳೊಳಗೆ ಬಗೆಹರಿಸುವಂತೆ ಒತ್ತಾಯಿಸಿದ್ದು, ಸಮಸ್ಯೆ ಬಗೆಹರಿಯದಿದ್ದರೆ ತುಮಕೂರಿನ ಡೀಸಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿ ಸಂಚಾಲಕ ಹಂದ್ರಾಳ್ ನಾಗಭೂಷಣ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಭೂಮಿ ಮತ್ತು ವಸತಿ ಹೊಂದಿರದ ಕುಟುಂಬಗಳ ಪರವಾಗಿ ಹೋರಾಟ ಕೈಗೊಂಡು ನ್ಯಾಯ ಒದಗಿಸುವುದೇ ಸಮಿತಿಯ ಮೂಲ ಉದ್ದೇಶ. ಕೊರಟಗೆರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ನಿವೇಶನವಿಲ್ಲದೆ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ನಮ್ಮ ಸಮಿತಿಯು ಧ್ವನಿಯಾಗಿ ನಿಂತಿದೆ ಎಂದು ಹೇಳಿದರು.

೨ ವರ್ಷಗಳಿಂದ ಈ ವಿಚಾರವಾಗಿ ಜಿಲ್ಲಾಡಳಿತ, ತಾಲೂಕು ಆಡಳಿತದ ನಡುವೆ ಪತ್ರಗಳ ವ್ಯವಹಾರ ನಡೆಸಿಕೊಂಡು ಬಂದಿದ್ದೇವೆ. ಸಮಿತಿಯ ಮನವಿಗೆ ಶೇ. ೨೫ರಷ್ಟು ಕೆಲಸ ಪೂರ್ಣಗೊಂಡು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇನ್ನೂ ಶೇ. ೭೫ರಷ್ಟು ಕೆಲಸ ವಿಳಂಬವಾಗಿದೆ. ನಿವೇಶನ ಜೊತೆಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಹೋರಾಟ ಸಮಿತಿಯಿಂದ ತಹಸೀಲ್ದಾರ್ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಹೋರಾಟ ಸಮಿತಿ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಭೂಮಿ, ವಸತಿ ವಿಚಾರವಾಗಿ ನೊಂದ ಮನಸ್ಸುಗಳ ಸಮಸ್ಯೆಗಳನ್ನು ಆಲಿಸಿ ಭೂಮಿ, ವಸತಿ ಹಕ್ಕು ಹೋರಾಟ ಸಮಿತಿಯಿಂದ ಅನೇಕ ಬಾರಿ ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ಎಸಿ, ತಹಸೀಲ್ದಾರ್‌ಗೆ ಮನವಿ ಮಾಡಿಕೊಂಡಿದ್ದೆವು. ಮಧುಗಿರಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯವಾಗಿ ಅಧಿಕಾರಿಗಳು ಕೈಗೊಂಡಿರುವ ನಿರ್ಣಯದ ಬಗ್ಗೆ ತಿಳಿಸುವಂತೆ ಈ ಹೋರಾಟವನ್ನು ಕೈಗೊಂಡಿದ್ದೇವೆ ಎಂದರು.

ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ನೀಲಗೊಂಡನಹಳ್ಳಿ ಮತ್ತು ಹೊಳವನಹಳ್ಳಿ ಗ್ರಾಪಂ ವ್ಯಾಪ್ತಿಯ ದುಗ್ಗೇನಹಳ್ಳಿ ಗ್ರಾಮದಲ್ಲಿ ನಿವೇಶನ ಅಭಿವೃದ್ಧಿ ಹಾಗೂ ಕಂದಾಯ ಇಲಾಖೆ, ಅರಣ್ಯ ಇಲಾಖೆ ಸಮನ್ವಯ ಹಾಗೂ ಸರ್ವೇ ಇಲಾಖೆ ಸಹಯೋಗದಲ್ಲಿ ಪರಿಭಾವಿತ ಅರಣ್ಯ ಕಾರ್ಯ ರೂಪದಲ್ಲಿ ಸಿಎನ್ ದುರ್ಗಾ ಹೋಬಳಿಯ ಓಬನಹಳ್ಳಿ ಸರ್ವೇ ನಂ೨೨, ೨೩, ೨೫ರಲ್ಲಿ ಅಳತೆ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ನ್ಯಾಯ ಒದಗಿಸುವುದಾಗಿ ತಾಲೂಕು ಆಡಳಿತದ ಪರ ಹೋರಾಟ ಸಮಿತಿಗೆ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಪ್ರಕರಣ:ಸರ್ಕಾರದ ಮನೆಗೆ 37 ಜನ ಮಾತ್ರ ಅರ್ಹ
ಉದ್ಯಮಿ ಮಾಲೀಕನ ಮನೆಗೇ ಕನ್ನ:ಕಾರು ಚಾಲಕ ಸೇರಿ ನಾಲ್ವರ ಸೆರೆ