ಎಸ್‌ಐಆರ್ ನೋಂದಣಿ ಪ್ರಕ್ರಿಯೆಯಲ್ಲಿ ತಾಲೂಕು ಪ್ರಗತಿ ಸಾಧಿಸುತ್ತಿದೆ: ಡಾ.ಕುಮಾರ

KannadaprabhaNewsNetwork |  
Published : Jul 26, 2026, 02:00 AM IST
24ಕೆಎಂಎನ್ ಡಿ22 | Kannada Prabha

ಸಾರಾಂಶ

ಸ್ಥಳೀಯ ಬಿಎಲ್‌ಎಗಳ ಸಹಕಾರದಿಂದ ಬಿಎಲ್‌ಒಗಳು ಅತಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಕ್ಷೇತ್ರದಲ್ಲಿ ಒಟ್ಟು 2,16,493 ಎಸ್‌ಐಆರ್ ಫಾರಂಗಳನ್ನು ಮತದಾರರಿಗೆ ಹಂಚಲಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಎಸ್‌ಐಆರ್ ನೋಂದಣಿ ಪ್ರಕ್ರಿಯೆಯಲ್ಲಿ ತಾಲೂಕು ಪ್ರಗತಿ ಸಾಧಿಸುತ್ತಿದೆ. ಇದುವರೆಗೂ ಸಿಕ್ಕಿರುವ ಅಂಕಿ ಅಂಶಗಳ ಆಧಾರಕ್ಕನುಗುಣವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 15 ಹೊಸ ಮತಗಟ್ಟೆ ಕೇಂದ್ರಗಳ ಅವಶ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಎಸ್‌ಐಆರ್ ನೋಂದಣಿ ಪ್ರಗತಿ ಕುರಿತಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಬಹುತೇಕ ಜನರು ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೂಡ ತಾಲೂಕಿನಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ಅಂತಹವರನ್ನು ಪತ್ತೆ ಹಚ್ಚುವುದು ಒಂದು ಸವಾಲಾಗಿದೆ. ಆ.8ರ ವರೆಗೆ ಎಸ್‌ಐಆರ್ ಮುಗಿಸಲು ಕಾಲಾವಕಾಶವಿದೆ. ಬಿಎಲ್‌ಒಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಯಾವೊಬ್ಬ ಮತದಾರರೂ ಸಹ ಎಸ್‌ಐಆರ್‌ನಿಂದ ಹೊರಗುಳಿಯದಂತೆ ಎಸ್‌ಐಆರ್ ಪ್ರಕ್ರಿಯೆ ಮುಗಿಸಬೇಕು ಎಂದರು.

ಸ್ಥಳೀಯ ಬಿಎಲ್‌ಎಗಳ ಸಹಕಾರದಿಂದ ಬಿಎಲ್‌ಒಗಳು ಅತಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು. ಕ್ಷೇತ್ರದಲ್ಲಿ ಒಟ್ಟು 2,16,493 ಎಸ್‌ಐಆರ್ ಫಾರಂಗಳನ್ನು ಮತದಾರರಿಗೆ ಹಂಚಲಾಗಿದೆ. ಇನ್ನು ಕೆಲವರು ಮರಣ ಹೊಂದಿದ್ದು, ಕೆಲವರು ಬೇರೆಡೆಗೆ ಮತದಾನದ ಹಕ್ಕನ್ನು ಉಳಿಸಿಕೊಂಡು ಈ ಕ್ಷೇತ್ರದಲ್ಲಿ ಹಕ್ಕನ್ನು ಬೇಡವೆಂದು ಡಿಲೀಟ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದರು. ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 18,302 ಮತದಾರರ ಡಬಲ್ ಎಂಟ್ರಿ ಅಥವಾ ಒಂದೇ ಚಹರೆ ಅಥವಾ ಮಾಹಿತಿ ಹೋಲಿಕೆಯಿರುವಂಥವುಗಳಿವೆ. ಈ ಪೈಕಿ 6007 ಜನರನ್ನು ಪರಿಶೀಲಿಸಲಾಗಿದೆ. ಪ್ರಥಮ ಹಂತವಾಗಿ ಎಸ್‌ಐಆರ್ ಫಾರಂಗಳ ವಿತರಣೆ ಹಾಗೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಆನಂತರದಲ್ಲಿ ಬಿಎಲ್‌ಎ ಗಳ ಸಹಕಾರ ಹಾಗೂ ಸ್ಥಳೀಯವಾಗಿ ಮಾಹಿತಿ ಪಡೆದು ಡಿಲೀಟ್ ಅಥವಾ ಹಕ್ಕು ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ಬಹುತೇಕರು ಬೆಂಗಳೂರು, ಮುಂಬೈಗಳಂತಹ ನಗರಗಳಲ್ಲಿ ವಾಸಿಸುತ್ತಿದ್ದು, ಹಬ್ಬದ ಸಮಯದಲ್ಲಿ ಸ್ವಗ್ರಾಮಗಳಿಗೆ ಆಗಮಿಸಬಹುದು. ಈ ಎಸ್‌ಐಆರ್ ಪ್ರಕ್ರಿಯೆಗಳನ್ನು ಬಹಳ ವೇಗವಾಗಿ ನಡೆಸಿದರೆ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಮತದಾರರ ನೋಂದಣಾಧಿಕಾರಿ ಡಾ.ಶಿವಲಿಂಗಯ್ಯ, ತಹಸೀಲ್ದಾರ್ ಅಶೋಕ್, ತಾಪಂ ಇಒ ಬಿ.ಎಸ್.ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ವಲಸಿಗರು ರಾಜ್ಯದಲ್ಲಿ ಮತದಾನದ ಹಕ್ಕು ಹೊಂದಿಲ್ಲ: ಡೀಸಿ ಡಾ.ಕುಮಾರ

ನಾಗಮಂಗಲ: ತಾಲೂಕಿನ ಕೋಳಿ ಫಾರಂಗಳು, ಹೆಂಚಿನ ಫ್ಯಾಕ್ಟರಿ ಸೇರಿದಂತೆ ಹಲವು ಕೈಗಾರಿಕಾ ಘಟಕಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಯಾವೊಬ್ಬ ವಲಸಿಗರೂ ಕೂಡ ನಾಗಮಂಗಲ ತಾಲೂಕು ಅಥವಾ ನಮ್ಮ ರಾಜ್ಯದಲ್ಲಿ ಮತದಾನದ ಹಕ್ಕು ಹೊಂದಿಲ್ಲ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಂಗ್ಲಾದೇಶ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ವಲಸಿಗರು ನಾಗಮಂಗಲ ತಾಲೂಕಿನಲ್ಲಿ ವಾಸಿಸುತ್ತಿದ್ದಾರೆಂದು ದೂರು ನೀಡಿದ ತರುವಾಯ ಅಧಿಕಾರಿಗಳ ತಂಡ ರಚಿಸಿ ವಲಸಿಗರನ್ನು ವಿಚಾರಣೆ ಮಾಡಲಾಗಿದೆ ಎಂದರು.

ಅಷ್ಟೂ ಜನರ ಆಧಾರ್‌ಕಾರ್ಡ್ ಹಾಗೂ ಮತದಾನದ ಗುರುತಿನ ಚೀಟಿಯ ನಕಲು ಪಡೆಯಲಾಗಿದೆ. ಅವುಗಳನ್ನು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದಿಂದ ಸಂಬಂಧಿಸಿದ ರಾಜ್ಯದ ಮತದಾರರ ಪಟ್ಟಿಯನ್ನು ಪರಿಶೀಲಿಸಿ ವರದಿ ನೀಡಲಿದೆ. ಆನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದರು.

ಇದುವರೆಗೂ ಅವರು ಈ ರಾಜ್ಯದಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲ. ಆಧಾರ್ ಕಾರ್ಡ್ ಮತ್ತು ಮತದಾನದ ಗುರುತಿನ ಚೀಟಿಗಳು ಉತ್ತರ ಭಾರತದ ವಿವಿಧ ರಾಜ್ಯಗಳ ವಿಳಾಸದಲ್ಲಿವೆ. ಅವುಗಳ ಸತ್ಯಾಸತ್ಯತೆಯ ಪರಿಶೀಲನೆಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಒತ್ತಡ ಹಾಕುವುದು ದುರಂತಗಳಿಗೆ ಕಾರಣ
ರಾಜ್ಯದ ನಂ.2 ತಂತ್ರಜ್ಞಾನ ಹಬ್ ಆಗಿ ಮೈಸೂರು