ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ, ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ತಮಟೆ ಚಳವಳಿ ಹಾಗೂ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.ಒಕ್ಕೂಟದ ಕಾರ್ಯಕರ್ತರು ಡಾ.ಬಿ.ಆರ್ ಅಂಬೇಡ್ಕರ್ ಭವನದಿಂದ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ತಮಟೆ ಚಳವಳಿ ಹಾಗೂ ಪಂಜಿನ ಮೆರವಣಿಗೆ ನಡೆಸಿ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು.
ಬಳಿಕ ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಅಮಿತ್ ಶಾ ವಿರುದ್ಧ ಧಿಕ್ಕಾರಗಳ ಘೋಷಣೆಗಳನ್ನು ಕೂಗಿ ಅಮಿತ್ ಶಾ ಭಾವಚಿತ್ರ ಹಾಗೂ ಮನಸ್ಮೃತಿ ಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ದಲಿತ ಮುಖಂಡ ಮಣಿಗೆರೆ ಕೆ.ಕಬ್ಬಾಳಯ್ಯ ಮಾತನಾಡಿ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ವಿಶ್ವ ಶ್ರೇಷ್ಠ ಭಾರತ ಸಂವಿಧಾನದಡಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿ ಸಂಸತ್ ಅಧಿವೇಶನದಲ್ಲಿ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾರನ್ನು ಕೂಡಲೇ ಸಂಪುಟದ ವಜಾಗೊಳಿಸಬೇಕು. ಅವರು ದೇಶದ ಜನತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜೈಭೀಮ್ ದಲಿತ ಜಾಗೃತಿ ವೇದಿಕೆ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಸರಕಾರ ಮನಸ್ಮೃತಿ ದೃಷ್ಟಿಕೊನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ವಿರುದ್ಧ ಆಡಳಿತ ನಡೆಸುತ್ತಾ ಬಂದಿದ್ದಾರೆ ಎಂದು ದೂರಿದರು.ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿ ಅಮಿತ್ ಶಾರನ್ನು ನರೇಂದ್ರ ಮೋದಿ ಅವರು ಕೂಡಲೇ ಸಂಪುಟದಿಂದ ಕೈಬಿಟ್ಟು ಸಂಸದ ಸ್ಥಾನದಿಂದ ವಜಾಗೊಳಿಸಿ ದೇಶದ್ರೋಹಿ ಕೇಸಿನಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕರಡಕೆರೆ ಯೋಗೇಶ್ ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಮರಿಸ್ವಾಮಿ, ಕೆಂಪರಾಜು, ಈ.ರುದ್ರಯ್ಯ ಚಿಕ್ಕರಸಿನಕೆರೆ ಜಾಣಪ್ಪ ,ಮುಡಿನಹಳ್ಳಿ ತಿಮ್ಮಯ್ಯ, ಟಿ.ಬಿ. ಹಳ್ಳಿ ಸಂತೋಷ್, ಗುಡಿಗೇರೆ ಬಸವರಾಜು, ರಾಘವೇಂದ್ರ, ಬಸವರಾಜು, ಬೊಪ್ಪಸಮುದ್ರ ಸಂತೋಷ್, ಅನಿಲ್ ಕುಮಾರ್, ಮಡೇನಹಳ್ಳಿ ಸಿದ್ದರಾಮು, ದೇವಿರಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.