ಮುಂಡರಗಿ: ಗ್ರಂಥಾಲಯಗಳು ಗ್ರಾಮೀಣ ಪ್ರದೇಶದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳು ಹೆಚ್ಚೆಚ್ಚು ಗ್ರಂಥಾಲಯಗಳ ಕಡೆಗೆ ಮುಖ ಮಾಡಿದರೆ ಬೌದ್ಧಿಕ ಬೆಳವಣಿಗೆ ಜತೆಗೆ ಒಂದು ಪೀಳಿಗೆಯನ್ನೇ ಸುಧಾರಿಸಿದಂತಾಗುತ್ತದೆ. ಪುಸ್ತಕಗಳಿಗೆ ಅಂತಹ ಮಹತ್ವ ಇದೆ. ತಾಲೂಕಿನ ಗ್ರಾಪಂಗಳ ಗ್ರಂಥಾಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ತಾಪಂ ಕಟಿಬದ್ಧವಾಗಿದೆ ಎಂದು ತಾಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು.
ಮುಂಬರುವ ದಿನಗಳಲ್ಲಿ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿಗೆ ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡುವುದಾಗಿ ಕಳಕಳಿ ವ್ಯಕ್ತಪಡಿಸಿದರು.
ತಾಪಂ ಯೋಜನಾಧಿಕಾರಿ ವಿಜಯಕುಮಾರ ಬೆಣ್ಣೆ ಮಾತನಾಡಿ, ಗ್ರಂಥಾಲಯಗಳು ಶಾಲೆಗಳಿಗಿರುವಷ್ಟು ಮಹತ್ವ ಹೊಂದಿವೆ. ಗ್ರಂಥಾಲಯಗಳು ಸುಧಾರಣೆಯಾದಷ್ಟು ಗ್ರಾಮೀಣ ಭಾಗದ ಸಾಂಸ್ಕೃತಿಕ ಪರಿಸರದ ಜತೆಗೆ ಸಾಕ್ಷರತಾ ಪ್ರಮಾಣವೂ ಹೆಚ್ಚಾಗಲಿದೆ. ಯುವಕರು ಗ್ರಂಥಾಲಯದ ಮಹತ್ವ ಅರಿತು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.ತಾಪಂ ವ್ಯವಸ್ಥಾಪಕ ಫಕ್ರುದ್ದೀನ ನದಾಫ, ಸಹಾಯಕ ನಿರ್ದೇಶಕ ಪ್ರವೀಣ ಗೋಣೆಮ್ಮನವರ, ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಗವಿಶಿದ್ದಪ್ಪ ಹಳ್ಳಾಕಾರ, ತಾಲೂಕಾಧ್ಯಕ್ಷ ಪಿ.ಎಚ್.ಪವಾರ ಹಾಗೂ ವಿವಿಧ ಗ್ರಾಪಂ ಗಂಥಾಲಯಗಳ ಮೇಲ್ವಿಚಾರಕರು ಹಾಗೂ ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.