ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಟಿಎಪಿಸಿಎಂಎಸ್ ನ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸೆ.28 ರಂದು ಚುನಾವಣೆ ನಡೆಯಲಿದ್ದು, ಶುಕ್ರವಾರ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 20ಕ್ಕೂ ಹೆಚ್ಚು ನಾಮಪತ್ರ ಸಲ್ಲಿಸಿದರು.ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ‘ಎ’ ವರ್ಗದಿಂದ 6 ಅಭ್ಯರ್ಥಿಗಳು ಮತ್ತು ಷೇರುದಾರರ ವತಿಯಿಂದ ‘ಬಿ’ ವರ್ಗದಿಂದ 8 ಜನ ಸೇರಿ ಒಟ್ಟು 14 ಅಭ್ಯರ್ಥಿಗಳು ಆಯ್ಕೆಯಾಗಬೇಕಾಗಿದೆ. ‘ಎ’ ವರ್ಗದಿಂದ ತಾಲೂಕಿನ 34 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸೂಚಿತವಾದ ಡೆಲಿಗೇಟ್ಸ್ ಗಳು ಮತದಾನದ ಹಕ್ಕು ಹೊಂದಿದ್ದರೆ, ‘ಬಿ’ ವರ್ಗಕ್ಕೆ 4888 ಜನ ಷೇರುದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.
ಶಾಸಕ ಎಚ್.ಟಿ.ಮಂಜು ಮತ್ತು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ನೇತೃತ್ವದಲ್ಲಿ ಟಿಎಪಿಸಿಎಂಎಸ್ ಗೆ ಆಗಮಿಸಿದ ನೂರಾರು ಜೆಡಿಎಸ್ ಕಾರ್ಯಕರ್ತರು ‘ಎ’ ವರ್ಗಕ್ಕೆ ಜೆಡಿಎಸ್ - ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾಗಿ ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಟಿ.ಬಲದೇವ, ಬಿ.ಎಂ.ಕಿರಣ್, ಕುರುಬರಹಳ್ಳಿ ವಕೀಲ ನಾಗೇಶ್ ಮತ್ತು ಮಾಂಬಳ್ಳಿ ಕರಿಶೆಟ್ಟಿ ನಾಮಪತ್ರ ಸಲ್ಲಿಸಿದರು.‘ಬಿ’ ವರ್ಗದಿಂದ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ಮತ್ತು ಕಿಕ್ಕೇರಿ ಮಧು, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕೆ.ಆರ್.ಪೇಟೆ ಜ್ಯೋತಿ, ಬಂಡೀಹೊಳೆ ಲತಾಮಣಿ, ಬಿ.ಸಿ.ಎಂ ‘ಎ’ ವರ್ಗದಿಂದ ನಾಗರಕಟ್ಟೆ ದಿಲೀಪ್, ಬಿ.ಸಿ.ಎಂ ‘ಬಿ’ ವರ್ಗದಿಂದ ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್ ಮತ್ತು ಪರಿಶಿಷ್ಟ ಪಂಗಡದಿಂದ ಬೊಮ್ಮೇನಹಳ್ಳಿ ಮಂಜುನಾಥ್ ಪರಿಶಿಷ್ಟ ಜಾತಿಯಿಂದ ರಂಗನಾಥಪುರ ನಾಗರಾಜು ತಮ್ಮ ನಾಮಪತ್ರ ಸಲ್ಲಿಸಿದರು.
ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ‘ಎ’ ವರ್ಗದಿಂದ ಬಲ್ಲೇನಹಳ್ಳಿ ರಮೇಶ್, ಅಘಲಯ ವಿಜಯಕುಮಾರ್, ಸಾರಂಗಿ ವಿಶ್ವನಾಥ್, ಕೋಡಿಮಾರನಹಳ್ಳಿ ಮಂಜುನಾಥ್, ಕಿಕ್ಕೇರಿ ಕಾಯಿ ಸುರೇಶ್ ಮತ್ತು ಮಡುವಿನಕೋಡಿ ಎಂ.ಪಿ.ಲೋಕೇಶ್ ನಾಮಪತ್ರ ಸಲ್ಲಿಸಿದರು.‘ಬಿ’ ವರ್ಗದಿಂದ ಸಾಮಾನ್ಯ ಕ್ಷೇತ್ರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ ಮತ್ತು ನಾಟನಹಳ್ಳಿ ಜಗದೀಶ್, ಬಿ.ಸಿ.ಎಂ ‘ಎ’ ವರ್ಗದಿಂದ ಶಶಿಧರ ಸಂಗಾಪುರ, ಬಿಸಿಎಂ ‘ಬಿ’ ವರ್ಗದಿಂದ ಹೊನ್ನೇನಹಳ್ಳಿ ಕೃಷ್ಣೇಗೌಡ, ಪರಿಶಿಷ್ಟ ಪಂಗಡದಿಂದ ಅಕ್ಕಿಹೆಬ್ಬಾಳು ಜಯರಾಮ ನಾಯಕ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಸೆ.20 ಕೊನೆ ದಿನ. ಸೆ.22 ರಂದು ನಾಮಪತ್ರಗಳ ಪರಿಶೀಲನೆ, ಸೆ.23 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಸೆ.28 ರಂದು ಚುನಾವಣೆ ನಡೆದು ಅಂದೇ ಮತ ಎಣಿಕೆ ನಡೆಯಲಿದೆ.