ಪಾಲಾಕ್ಷ ಬಿ. ತಿಪ್ಪಳ್ಳಿ
ಟಿಎಪಿಸಿಎಂಎಸ್‌ನ ''ಎ'' ವರ್ಗದ ೭ ಸಾಮಾನ್ಯ, ''ಸಿ'' ವರ್ಗದಿಂದ ೭ ಸೇರಿ ಒಟ್ಟು ೧೪ ಸ್ಥಾನಗಳಿಗೆ ಅ. ೧೨ರಂದು ಚುನಾವಣೆ ನಡೆಯಬೇಕಿತ್ತು. ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಪೂರ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಹಕಾರ ಸಂಘಗಳ ಕಾಯ್ದೆ ೧೯೫೯ರ ೧೩ (ಡಿ) ನಿಯಮ ಪಾಲನೆ ಮಾಡದ ಕಾರಣ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಟಿಎಪಿಸಿಎಂಎಸ್‌ನಲ್ಲಿ ೨೧ ಸಹಕಾರ ಸಂಘಗಳು ಷೇರುದಾರ ಸಂಘಗಳಾಗಿವೆ. ಅದರಲ್ಲಿ ರಾಜಕೀಯ ದುರುದ್ದೇಶದಿಂದ ಕೇವಲ ೧೬ ಸಂಘಗಳನ್ನು ಮಾತ್ರ ಮಾನ್ಯ ಮಾಡಲಾಗಿದ್ದು, ಇನ್ನು ಯಲಬುರ್ಗಾ ತಾಲೂಕಿನ ತಾಳಕೇರಿ, ಹಿರೇವಂಕಲಕುಂಟಾ, ಬಂಡಿ ಹಾಗೂ ಕುಕನೂರು ತಾಲೂಕಿನ ಚಿಕೇನಕೊಪ್ಪ, ತಳಕಲ್ ಪಿಎಸಿಎಸ್ ಸೇರಿ ೫ ಸಂಘಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿಯಮ ಪಾಲನೆಯಾಗದ ಕಾರಣ ಚುನಾವಣೆ ತಾತ್ಕಾಲಿಕ ತಡೆ ಹಿಡಿಯುವಂತೆ ಕುಕನೂರು ತಾಲೂಕಿನ ಚಿಕೇನಕೊಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ ಹಾಗೂ ತಳಕಲ್ ಕೃಷಿ ಪತ್ತಿನ ಸಹಕಾರ ಸಂಘದ ಚಂದ್ರಶೇಖರಯ್ಯ ಚಂಡೂರ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರ ಅರ್ಜಿ ಕೂಲಂಕಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ಉಪ ನಿಬಂಧಕರು ಸದ್ಯ ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿದ್ದಾರೆ.
ಈ ಹಿಂದೆ ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಫಲಿತಾಂಶದ ಸಮಯದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದು ಫಲಿತಾಂಶ ತಡೆಹಿಡಿಯಲಾಗಿತ್ತು. ಇದು ಕೂಡ ಕೋರ್ಟ್ ಮೆಟ್ಟಿಲೇರಿತ್ತು. ಇದೇ ಅ. ೯ರಂದು ಫಲಿತಾಂಶ ಹೊರ ಬೀಳಲಿದೆ.ಯಲಬುರ್ಗಾ ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕೆ ಸಹಕಾರ ಸಂಘಗಳನ್ನು ಬಲಿ ಕೊಡುತ್ತಿದ್ದಾರೆ. ವಾಮಮಾರ್ಗದಿಂದ ಅಧಿಕಾರ ಹಿಡಿಯಬೇಕು ಎನ್ನುವ ದುರುದ್ದೇಶ ಫಲಿಸುವುದಿಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರ್ಹ ಸಂಘಗಳನ್ನು ಅನರ್ಹ ಮಾಡಿರುವುದು ಸಹಕಾರ ಸಂಘಗಳ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನ ಎಂದು ಚಿಕೇನಕೊಪ್ಪ ಪಿಎಸಿಎಸ್ ಅಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ ಹೇಳಿದರು.