ಅರುಣ
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ನೆಲೆ ಕಂಡುಕೊಂಡಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ 900 ವರ್ಷಗಳ ದೀರ್ಘ ಇತಿಹಾಸವಿದೆ. ಅಂಚಿನ ಸಮುದಾಯದ ಮೇರು ಪುರುಷರಾದ ವಿಶ್ವಬಂಧು ಮರುಳಸಿದ್ದರಿಂದ ಬಳಿವಿಡಿದು ಸಾಗಿಬಂದ ಪೀಠ ಇದು.
ವಿಶ್ವಬಂಧು ಮರುಳಸಿದ್ಧರು 12ನೇ ಶತಮಾನದ ಬಸವಣ್ಣನವರ ಹಿರಿಯ ಸಮಕಾಲೀನರು. ಮೂಢನಂಬಿಕೆ, ಅಂಧಶ್ರದ್ಧೆಗಳು, ಅವೈಚಾರಿಕತೆ ಜನರಲ್ಲಿ ಮನೆಮಾಡಿಕೊಂಡಿದ್ದ ಆ ಕಾಲಘಟ್ಟದಲ್ಲಿಯೇ ಅವುಗಳ ನಿರ್ಮೂಲನಕ್ಕೆ ಹೋರಾಡಿದರು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಲೋಕಸಂಚಾರ ಕೈಗೊಂಡರು.ತಮ್ಮ ನಂತರವೂ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಜನಜಾಗೃತಿ ಮೂಡಿಸುವ ಸಲುವಾಗಿ ವಿಶ್ವಬಂಧು ಮರುಳಸಿದ್ಧರು ಸದ್ಧರ್ಮ ಪೀಠವನ್ನು ಸ್ಥಾಪಿಸಿದರು. ಅದಕ್ಕಾಗಿ ಅಗತ್ಯವಿದ್ದ ಭೂಮಿಯನ್ನು ತಮ್ಮ ಸಾಕು ತಂದೆ ಬಾಚಣ್ಣಗೌಡರಿಂದ ಪಡೆದರು. ತಮ್ಮ ಕಾರುಣ್ಯಶಿಶು ತೆಲುಗುಬಾಳು ಸಿದ್ಧಯ್ಯನ್ನು ಮಾಘ ಶುದ್ಧ ಪೂರ್ಣಿಮೆಯ ದಿನ ಈ ಪೀಠದಲ್ಲಿ ಹರಸಿ ಆಶೀರ್ವದಿಸಿದರು. ಅದುವೇ, ʻತರಳಾ, ಬಾಳುʼ. ಇದೊಂದು ದಿವ್ಯಾಕ್ಷರಿ ಮಂತ್ರ. ಲೋಕದ ಜನರೆಲ್ಲರೂ ಸುಖ-ಶಾಂತಿ-ನೆಮ್ಮದಿಯಿಂದ ಬದುಕುವ ಆಶಯದ ಆಶೀರ್ವಾದ ಮಂತ್ರವೇ, ತರಳಾ,ಬಾಳು.
ಬಸವಾದಿ ಶರಣರ ಸಾಹಿತ್ಯದ ಅಪ್ರತಿಮ ಪ್ರತಿಪಾದಕರು ಅವರು. ಆ ತತ್ವದ ಸದಾಶಯಗಳನ್ನು ಪ್ರಚುರಪಡಿಸಲು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ಸಾಧನವಾಗಿ ಬಳಸಿದ ಪರಿಣಾಮವಾಗಿ ಮಠದಲ್ಲಿಯೇ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು 1950 ರಲ್ಲಿ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗ-ದಾವಣಗೆರೆ ಅಖಂಡ ಜಿಲ್ಲೆಗಳ ತಾಲೂಕು ಕೇಂದ್ರವಾಗಿದ್ದ ಜಗಳೂರಿನಲ್ಲಿ ನಡೆಯಿತು. ಅಲ್ಲಿಂದ ಮುಂದೆ ನಿರಂತರವಾಗಿ ರಾಜ್ಯದ ಹಲವು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿಯೂ ಈ ಮಹೋತ್ಸವ ನಡೆಯುತ್ತಾ ಬಂದಿದೆ. 1975ರಲ್ಲಿ ರಾಜ್ಯದ ಗಡಿ ದಾಟಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿಯೂ ನಡೆದಿದೆ.
2001ರಲ್ಲಿ ಅರಸೀಕೆರೆ ಹುಣ್ಣಿಮೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ತೀವ್ರ ಭೂಕಂಪ ಸಂಭವಿಸಿದ ಹಿನ್ನೆಲೆ ನೊಂದ ಜೀವಗಳಿಗೆ ಪರಿಹಾರ ನೀಡಲು ಹುಣ್ಣಿಮೆ ಮಹೋತ್ಸವದ ಮೆರವಣಿ ರದ್ದುಪಡಿಸಿ ಪಾದಯಾತ್ರೆಯಲ್ಲಿ ನಿಧಿ ಸಂಗ್ರಹಿಸಿ ನೀಡಿದ್ದಾರೆ. 2004ರ ಬರಗಾಲದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ಆನಗೋಡು ಸುತ್ತಲಿನ 9 ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆಸಿ ಕುಡಿಯುವ ನೀರು ಒದಗಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.
ಇದೀಗ ಭರಮಸಾಗರ ಸುತ್ತಲಿನ 43 ಕೆರೆಗಳು ತುಂಬಿ ತುಳುಕಾಡುತ್ತಿವೆ. ಜಗಳೂರು ತಾಲ್ಲೂಕಿನ 56 ಕೆರೆಗಳಿಗೆ ನೀರು ಹರಿದು ಬಂದಿದೆ. ಇದೆಲ್ಲವೂ ಶ್ರೀಗಳ ದೂರದೃಷ್ಟಿಯಿಂದ ಜಾರಿಗೊಂಡ ಯೋಜನೆಗಳು. ಕೆರೆಗಳಲ್ಲಿ ನೀರು ತುಂಬಿ ಅಂತರ್ಜಲಮಟ್ಟ ಸುಧಾರಿಸಿದ ವೇಳೆ ಭರಮಸಾಗರದಲ್ಲಿ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವವು ಆ ಭಾಗದ ಜನರೆಲ್ಲರ ಒಗ್ಗೂಡುವಿಕೆಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.